ಬೆಂಗಳೂರು,ಏ.13- ಸಂವಿಧಾನ ಬದಲಾವಣೆ ಮಾಡುವಂಥ ದುಸ್ಸಾಹಕ್ಕೆ ಬಿಜೆಪಿ ಎಂದಿಗೂ ಕೈ ಹಾಕುವುದಿಲ್ಲ. ದಿ.ಇಂದಿರಾಗಾಂಧಿಯವರು ಸಂವಿಧಾನವನ್ನೇ ಬುಡುಮೇಲು ಮಾಡಿದಾಗ ಕಾಂಗ್ರೆಸ್ನವರು ಏಕೆ ಸುಮ್ಮನಿದ್ದರು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರು ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸ್ವತಃ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರಮೋದಿಯವರೇ ಹೇಳಿರುವಾಗ ಪದೇ ಪದೇ ಇದೇ ಮಾತು ಪ್ರಸ್ತಾಪಿಸುತ್ತಿರುವ ಉದ್ದೇಶವಾದರೂ ಏನು ಎಂದು ತರಾಟೆಗೆ ತೆಗೆದುಕೊಂಡರು.
ನರೇಂದ್ರಮೋದಿ ಅವರು ಪ್ರಧಾನಿಯಾದ ಬಳಿಕ ಭಯೋತ್ಪಾದಕ ಕೃತ್ಯಗಳು ಶೇ.90 ಕಡಿಮೆಯಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ದಿನ ಬಾಂಬ್ ಬ್ಲಾಸ್ಟ್ ಆಗುತ್ತಿತ್ತು. ದೇಶದಲ್ಲಿ ನರೇಂದ್ರಮೋದಿ ದೇಶ ಕಾಯುತ್ತಿದ್ದಾರೆ. ದೇಶದ ರಕ್ಷಣೆ ಮಾಡುತ್ತಿದ್ದಾರೆ.ರಾಷ್ಟ್ರದ ಭದ್ರತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ಚುನಾವಣಾ ಸಂದರ್ಭದಲ್ಲಿ ವೈಯಕ್ತಿಕ ಆರೋಪ ಸರಿಯಲ್ಲ. ಆದರೆ ಪ್ರಧಾನಿ ಮೋದಿಯವರನ್ನು ಹಿಟ್ಲರ್ ಹಾಗೂ ಮುಸೊಲೊನಿ ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ನೈಜ ಹಿಟ್ಲರ್ ಮನಸ್ಥಿತಿ ಕಾಂಗ್ರೆಸ್ ನಾಯಕರದ್ದು ಎಂದು ತಿರುಗೇಟು ನೀಡಿದರು.
ರಾಜಧಾನಿ ಬೆಂಗಳೂರಿನ ಕುಂದಲಹಳ್ಳಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಉಗ್ರರು ಕಾಂಗ್ರೆಸ್ ಪಕ್ಷದ ಸಹೋದರಿಯಂತಿರುವ ಮಮತಾ ಬ್ಯಾನರ್ಜಿ ಅವರ ತವರಿನಲ್ಲೇ ಸಿಕ್ಕಿಬಿದ್ದಿದ್ದು, ಕರ್ನಾಟಕದ ಪರವಾಗಿ ಎನ್ಐಎ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಆರೋಪಿಗಳ ಬಂಧನದಿಂದ ನಾಡಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಘಟನೆಯ ಸ್ಥಳಕ್ಕೆ ಹೋಗಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡಿದ್ದರು. ಅಲ್ಪಸಂಖ್ಯಾತರ ವಿರುದ್ಧ ಆರೋಪ ಬಂದರೆ ವೋಟ್ ಬ್ಯಾಂಕ್ ಖಾಲಿ ಆಗುತ್ತದೆ ಎಂಬ ಆತಂಕ ಕಾಂಗ್ರೆಸ್ ನಾಯಕರದ್ದು ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ನಿರ್ದೇಶನದಿಂದ ಪೊಲೀಸರಿಗೆ ಆರೋಪಿಗಳ ಜಾಡು ಸಿಕ್ಕಿಲ್ಲ. ಎನ್ಐಎ ಬಂದಿದ್ದರಿಂದ ಆರೋಪಿಗಳ ಪತ್ತೆಯಾಗಿದೆ ಎಂದು ಹೇಳಿದ ಅವರು, ಭಯೋತ್ಪಾದಕರನ್ನು ಎನ್ಐಎ ತಂಡ ಬಂಧಿಸಿದೆ. ಬಿಜೆಪಿ ಕಾರ್ಯಕರ್ತರನ್ನು ತನಿಖೆ ಮಾಡಿದ್ದಾರೆ ಎಂದು ದಿನೇಶ್ ಗುಂಡುರಾವ್ ಹೇಳಿದ್ದರು.
ಬಿಜೆಪಿ ಕಾರ್ಯಕರ್ತ ಅಲ್ಲಿ ಸಾಕ್ಷಿ ಕೊಟ್ಟಿದ್ದಕ್ಕೆ ಅದರ ಆಧಾರದ ಮೇಲೆ ಉಗ್ರರನ್ನು ಬಂಧಿಸಲಾಗಿದೆ ಎಂದು ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧನ ಮಾಡಲು ಒಂದು ವಾರ ತೆಗೆದುಕೊಂಡರು. ಆದರೆ ಅವರು ಕೂಗೇ ಇಲ್ಲ ಎಂದು ಕಾಂಗ್ರೆಸ್ ಸಚಿವರು ವಾದ ಮಾಡಿದ್ದರು. ಆದರೆ ಈಗ ಯಾರದ್ದು ಕಾಮಾಲೆ ಕಣ್ಣು? ಕಾಂಗ್ರೆಸ್ನವರು ಈಗೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಡಿಜೆಹಳ್ಳಿಯಲ್ಲಿ ದಲಿತ ಶಾಸಕರ ಮನೆಗೆ ಬೆಂಕಿ ಹಾಕಿದ್ದರು. ಬೆಂಕಿ ಹಾಕಿದ ಪ್ರಮುಖ ಆರೋಪಿ ಸಂಪತ್ರಾಜ್ಗೆ ಬೋರ್ಡ್ ಚೇರಮೆನ್ ಸ್ಥಾನ ಕೊಟ್ಟಿದ್ದಾರೆ. ಸಂಪತ್ರಾಜ್ ಬಂಧನಕ್ಕೊಳಗಾಗಿ ಬೇಲ್ ಮೇಲೆ ಹೊರಗೆ ಬಂದಿದ್ದಾನೆ ಎಂದು ಕುಹಕವಾಡಿದರು. ಹೃದಯವಂತ ಬಂದಾಗ ಹೃದಯ ಇಲ್ಲದವರು ಕಾಣೆಯಾಗುತ್ತಾರೆ. ಈ ಚುನಾವಣೆಯಲ್ಲಿ ಕಟುಕರು ಕಾಣೆಯಾಗುತ್ತಾರೆ ಎಂದು ಪರೋಕ್ಷವಾಗಿ ಸಂಸದ ಡಿ.ಕೆ.ಸುರೇಶ್ಗೆ ಟಾಂಗ್ ನೀಡಿದರು.