ಚಿಕ್ಕಬಳ್ಳಾಪುರ(Chikkaballapur),ಡಿ.22– ದಟ್ಟವಾದ ಮಂಜು, ಹೆದ್ದಾರಿಗಳಲ್ಲಿ ಸೂಚನಾ ಫಲಕ ಇಲ್ಲದಿರುವುದು ಸೇರಿದಂತೆ ಮತ್ತಿತರ ಕಾರಣಗಳಿಂದ ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಕಳೆದ ಒಂದು ತಿಂಗಳಲ್ಲಿ ಸುಮಾರು 50ಕ್ಕೂ ಅಧಿಕ ಅಪಘಾತ (Road Accident) ಸಂಭವಿಸಿ ಸಾವು-ನೋವು ಉಂಟಾಗಿದೆ. ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-44 (ಬೆಂಗಳೂರು ಬಳ್ಳಾರಿ) ಹಾಗೂ ರಾಷ್ಟ್ರೀಯ ಹೆದ್ದಾರಿ 234 ಮಂಗಳೂರು-ತಿರುವಣ್ಣಾಮಲೈ (ಮಾರ್ಗ ಚಿಕ್ಕಬಳ್ಳಾಪುರ ಶಿಡ್ಲಘಟ್ಟ ) ಗಳಲ್ಲಿ ಯಾವುದೇ ಅಡೆ-ತಡೆಗಳು ಇಲ್ಲದೆ ಅಪಘಾತ ಹೇರಳವಾಗಿವೆ.
ಕಳೆದ ಎರಡು ತಿಂಗಳಿಂದೀಚೆಗೆ ಈ ಭಾಗದಲ್ಲಿ ದಟ್ಟವಾದ ಮಂಜು ಆವರಿಸುತ್ತಿರುವ ಕಾರಣ ಹಾಗೂ ಈ ಹೆದ್ದಾರಿಗಳಲ್ಲಿ ಯಾವುದೇ ಅಪಘಾತ ವಲಯಗಳೆಂಬ ಸೂಚನಾ ಫಲಕಗಳು ಇಲ್ಲದ ಕಾರಣ ಅಪಘಾತಗಳಿಂದಾಗಿ ಸಣ್ಣಪುಟ್ಟ ಗಾಯಗಳಿಗಿಂತ ಹೆಚ್ಚಾಗಿ ಸಾವು-ನೋವುಗಳೆ ಹೆಚ್ಚಾಗಿವೆ.
ಇನ್ನು ಬೆಂಗಳೂರು ಬಳ್ಳಾರಿ ರಸ್ತೆಯ ಚಿಕ್ಕಬಳ್ಳಾಪುರದ ಚದಲಪುರ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲ್ ಸೇತುವೆ ನಿರ್ಮಿಸುವ ಕಾಮಗಾರಿ ಕಳೆದ ಒಂದೂವರೆ ವರ್ಷದಿಂದ ಕುಂಟುತ್ತಾ, ತೆವಳುತ್ತಾ ನಡೆದಿರುವ ಕಾರಣ ಅಪಘಾತಗಳಿಗಿಂತ ಇಲ್ಲಿಂದ ಸಾಗಿ ಹೋಗಬೇಕಾದ ವಾಹನ ಚಾಲಕರು ನರಕಯಾತನೆ ಅನುಭವಿಸುವಂತಾಗಿದೆ.
ಇದೇ ಸ್ಥಳದಲ್ಲಿ ಎರಡು ವರ್ಷಗಳ ಹಿಂದೆ ಸಾಕಷ್ಟು ಅಪಘಾತ ಉಂಟಾಗಿ ಒಂದೇ ದಿನ ಗವಿಗಾನಹಳ್ಳಿಯ ಆರು ಜನ ಸಾವಿಗಿಡಾಗಿದ್ದು ಅದಕ್ಕೂ ಮುನ್ನ ಹಲವಾರು ಅಪಘಾತಗಳಲ್ಲಿ ಸಾವು-ನೋವುಗಳೆ ಹೆಚ್ಚಾಗಿ ನಡೆದಿದ್ದರಿಂದ ಇದನ್ನು ಮೇಲ್ ಸೇತುವೆ ಮಾಡಬೇಕೆಂಬ ಒತ್ತಾಯದಿಂದಾಗಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕಾಮಗಾರಿಯನ್ನೇನೋ ಕೈಗೆತ್ತಿಕೊಂಡರು. ಆದರೆ ಕುಂಟುತ್ತಾ ತೆವಳುತ್ತಾ ಈ ಕಾಮಗಾರಿ ನಡೆಯುತ್ತಿರುವುದಿಂದಾಗಿ ಅಪಘಾತಗಳಂಥ ಅವಘಡಗಳು ನಡೆಯುತ್ತಲೇ ಇದ್ದು ಕಾಮಗಾರಿ ಜರುರಾಗಿ ಮಾಡದ ಕಾರಣ ಈ ಭಾಗದ ಜನ ಆಕ್ರೋಶಗೊಂಡಿದ್ದಾರೆ.
ಇನ್ನು ಕಳೆದ 15 ದಿನದಿಂದೀಚೆಗೆ ನಂದಿ ಕ್ರಾಸ್, ಚಿಕ್ಕಬಳ್ಳಾಪುರ ಮಾರ್ಗ ಮಧ್ಯೆಯೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಅನೇಕರು ಕೈ ಕಾಲು ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ವಿಶೇಷ ಚೇತನ ಕುಟುಂಬ ಒಂದು ಇದೇ ರಾಷ್ಟ್ರೀಯ ಹೆದ್ದಾರಿ ಬನ್ನಿಕುಪ್ಪೆ ಸಮೀಪದ ಗೇಟ್‌ನಲ್ಲಿ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ವಿಶೇಷ ಚೇತನ ಸಾವಿಗೀಡಾದರೆ ಅವರ ಜೊತೆಗಿದ್ದವರು ತೀವ್ರವಾಗಿ ಗಾಯಗೊಂಡು ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ದಟ್ಟವಾದ ಮಂಜು ಆವರಿಸಿ ರಸ್ತೆ ಕಾಣದಂತಾಗಿ ಅಪಘಾತಗಳು ಸಂಭವಿಸುತ್ತವೆ. ಜೊತೆಗೆ ಮುಂಜಾವಿನಲ್ಲಿ ಚಾಲಕರು ವಾಹನಗಳನ್ನು ಓಡಿಸುವುದರಿಂದ ಸಹ ಅವಘಡಗಳು ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ಚಾಲಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಸೂಕ್ತವಾಗಿದೆ.
ಡಿವೈಡರ್ ದಾಟಿ ಬಸ್‌ಗೆ ಡಿಕ್ಕಿ ಹೊಡೆದ ಕಾರು, ಮೂವರು ಯುವಕರ ದುರ್ಮರಣ
