ಬೆಂಗಳೂರು,ಡಿ.22- ಪತ್ನಿಯನ್ನು ಉಪಾಯವಾಗಿ ತಮ್ಮ ಸೈಟ್ ಬಳಿ ಕರೆದುಕೊಂಡು ಹೋಗಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತಿಯೇ ಕೊಲೆ ಮಾಡಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಿಟ್ಟಿಗಾನ ಹಳ್ಳಿಯ ನಿವಾಸಿ ಗಾಯತ್ರಿ (55) ಕೊಲೆ ಯಾದ ಶಿಕ್ಷಕಿ. ಇವರು ಸರ್ಕಾರಿ ಶಾಲೆಯೊಂದರ ದೈಹಿಕ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಿಟ್ಟಿಗಾನ ಹಳ್ಳಿಯ ನಿವಾಸಿಗಳಾದ ಗಾಯತ್ರಿ-ಅನಂತ್ (62) ದಂಪತಿಗೆ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮಗಳಿದ್ದಾಳೆ.
ದಂಪತಿ ನಡುವೆ ಆಗಾಗ್ಗೆ ಕೌಟುಂಬಿಕ ವಿಚಾರವಾಗಿ ಜಗಳ ನಡೆಯುತ್ತಿತ್ತು. ಪತ್ನಿಯನ್ನು ಕೊಲೆ ಮಾಡಲು ಆರೋಪಿ ಅನಂತ್ ಸಂಚು ರೂಪಿಸಿದ್ದಾನೆ. ಅದರಂತೆ ನಿನ್ನೆ ಪತ್ನಿಯನ್ನು ಮನವೊಲಿಸಿ ಸೈಟ್‌ನಲ್ಲಿ ಮನೆ ಕಟ್ಟಬೇಕು, ಬಾ ತೋರಿಸುತ್ತೇನೆ ಎಂದು ಉಪಾಯವಾಗಿ ಸ್ಕೂಟಿಯಲ್ಲಿ ಕರೆದೊಯ್ದಿದ್ದಾನೆ.
ಸೈಟ್ ಬಳಿ ಹೋಗುತ್ತಿದ್ದಂತೆ ಪತ್ನಿಯ ತಲೆ ಮೇಲೆ ಕಲ್ಲು ಹಾಕಿ ಸಾಯಿಸಿದ್ದಾನೆ. ನಂತರ ಅಪಘಾತದಲ್ಲಿ ಪತ್ನಿ ಮೃತಪಟ್ಟಿದ್ದಾಳೆಂದು ಸ್ಥಳೀಯ ನಿವಾಸಿಗಳನ್ನು ನಂಬಿಸಿದ್ದಾನೆ. ಈ ಬಗ್ಗೆ ಪೊಲೀಸರಿಗೆ ಸ್ಥಳೀಯರು ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರಿ ಠಾಣೆ ಪೊಲೀಸರ ಮುಂದೆ ಗೋಳಾಡುತ್ತಾ, ಬುಲೆಟ್ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಸ್ಕೂಟಿಯಲ್ಲಿ ಹಿಂಬದಿ ಕುಳಿತಿದ್ದ ನನ್ನ ಪತ್ನಿ ಕೆಳಗೆ ಬಿದ್ದಾಗ ಬೈಕ್ ತಲೆ ಮೇಲೆ ಹತ್ತಿದ್ದರಿಂದ ಮೃತಪಟ್ಟಿದ್ದಾಳೆಂದು ಆತ ಕಥೆ ಕಟ್ಟಿದ್ದಾನೆ.
ಪೊಲೀಸರು ಸೂಕವಾಗಿ ಮೃತದೇಹವನ್ನು ಪರಿಶೀಲಿಸಿದಾಗ ತಲೆಗೆ ಗಂಭೀರ ಗಾಯವಾಗಿರುವುದು ಕಂಡು ಬಂದಿದೆ. ಇದು ಅಪಘಾತದಿಂದ ಆಗಿರುವುದಲ್ಲ ಎಂಬ ಶಂಕೆ ಪೊಲೀಸರಿಗೆ ಮೂಡಿದೆ.
ನಂತರ ಸಂಚಾರಿ ಪೊಲೀಸರು ಬಾಗಲೂರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಾಗಲೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅನುಮಾನದ ಮೇರೆಗೆ ಅನಂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಪತ್ನಿ ನನಗೆ ಕಿರುಕುಳ ನೀಡುತ್ತಿದ್ದಳು, ಊಟದಲ್ಲಿ ವಿಷಹಾಕಿ ಸಾಯಿಸುತ್ತೇನೆಂದು ಬೆದರಿಸುತ್ತಿದ್ದಳು ಹಾಗಾಗಿ ನಾನೇ ಕೊಲೆ ಮಾಡಿದನೆಂದು ಬಾಯ್ಬಿಟ್ಟಿದ್ದಾನೆ.ಪೊಲೀಸರು ಆರೋಪಿ ಅನಂತ್‌ನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
