Tuesday, November 26, 2024
Homeರಾಷ್ಟ್ರೀಯ | Nationalಕಾಂಗ್ರೆಸ್‍ ಪರ ಪ್ರಚಾರ ಮಾಡದಿರಲು ನವಜೋತ್ ಸಿಂಗ್ ಸಿದ್ಧು ನಿರ್ಧಾರ

ಕಾಂಗ್ರೆಸ್‍ ಪರ ಪ್ರಚಾರ ಮಾಡದಿರಲು ನವಜೋತ್ ಸಿಂಗ್ ಸಿದ್ಧು ನಿರ್ಧಾರ

ಚಂಡೀಗಢ,ಏ.19- ಲೋಕಸಭಾ ಚುನಾವಣೆಯಲ್ಲಿ ನವಜೋತ್ ಸಿಂಗ್ ಸಿದ್ಧು ಹಾಗೂ ಅವರ ಗುಂಪಿನ ಯಾವುದೇ ಕಾರ್ಯಕರ್ತರು ಕಾಂಗ್ರೆಸ್ ಪರ ಪ್ರಚಾರ ಮಾಡದಿರಲು ನಿರ್ಧರಿಸಿದ್ದಾರೆ. ನವಜೋತ್ ಸಿಂಗ್ ಸಿಧು ಅವರಲ್ಲದೆ, ಪಂಜಾಬ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ಶಂಶೇರ್ ಸಿಂಗ್ ಡುಲ್ಲೋ, ಮಾಜಿ ಶಾಸಕ ನಾಜರ್‍ಸಿಂಗ್ ಮನ್ಶಾಹಿಯಾ, ಜಗದೇವ್ ಸಿಂಗ್ ಕಮಲು, ಮಹೇಶ್ ಇಂದರ್ ಸಿಂಗ್ ಮತ್ತು ಬಟಿಂಡಾ ಗ್ರಾಮಾಂತರ ಕಾಂಗ್ರೆಸ್ ಉಸ್ತುವಾರಿ ಹರ್ಬಿಂದರ್ ಲಾಡಿ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಈ ತೀರ್ಮಾನ ಕೈಗೊಂಡಿದ್ದಾರೆ.

ಪಕ್ಷಕ್ಕೆ ಅಗತ್ಯವಿರುವಾಗ ನವಜೋತ್ ಸಿಂಗ್ ಸಿಧು ಅವರನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಚುನಾವಣೆಯ ನಂತರ ಅವರನ್ನು ಕಡೆಗಣಿಸಲಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಲೋಕಸಭೆ ಚುನಾವಣೆಗೆ ಪಕ್ಷವು ತನ್ನ ಅಭ್ಯರ್ಥಿಗಳನ್ನು ನಿರ್ಧರಿಸುವಾಗ ನವಜೋತ್ ಸಿಂಗ್ ಸಿದ್ಧು ಅವರೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೆ ಈಗ ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿಗಳು ಸಿದ್ಧು ಅವರನ್ನು ಸಂಪರ್ಕಿಸಿ ಪ್ರಚಾರಕ್ಕಾಗಿ ರ್ಯಾಲಿಗಳನ್ನು ನಡೆಸುವಂತೆ ಮನವಿ ಮಾಡುತ್ತಿದ್ದಾರೆ ಎಂದಿದ್ದಾರೆ.

ಪಕ್ಷದ ಮೇಲೆ ಸಿದ್ಧುಗೆ ಸಿಟ್ಟು :
ನವಜೋತ್ ಸಿಂಗ್ ಸಿದ್ಧು ಅವರು ಪಕ್ಷವನ್ನು ಬಲಪಡಿಸಲು ಪಂಜಾಬ್‍ನಾದ್ಯಂತ ರ್ಯಾಲಿಗಳನ್ನು ನಡೆಸುತ್ತಿದ್ದಾಗ, ಸಿದ್ಧು ಅವರ ರ್ಯಾಲಿಗಳನ್ನು ಆಯೋಜಿಸಿದ ಅನೇಕ ನಾಯಕರನ್ನು ಅನಗತ್ಯವಾಗಿ ಪಕ್ಷದಿಂದ ಹೊರಹಾಕಲಾಯಿತು ಎಂದು ಕೆಲ ಕಾರ್ಯಕರ್ತರು ದೂರಿದ್ದಾರೆ.

ಟಿಕೆಟ್ ನಿರಾಕರಣೆ ನವಜೋತ್ ಸಿಂಗ್ ಸಿದ್ಧು ಅವರು ತಮ್ಮ ಪತ್ನಿಯ ಅನಾರೋಗ್ಯದ ಕಾರಣಕ್ಕಾಗಿ ಕಾಂಗ್ರೆಸ್ ಟಿಕೆಟ್‍ನಲ್ಲಿ ಪಟಿಯಾಲ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ರ್ಪಸಲು ನಿರಾಕರಿಸಿದ್ದರು ಮತ್ತು ನಂತರ ಅವರು ತಮ್ಮ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ಐಪಿಎಲ್‍ಗೆ ಸೇರಿದ್ದರು.

ಸದ್ಯ ಸಿಧು ಐಪಿಎಲ್‍ನಲ್ಲಿ ಕಾಮೆಂಟೇಟರ್ ಆಗಿ ತೊಡಗಿಸಿಕೊಂಡಿದ್ದಾರೆ. ಐಪಿಎಲ್‍ನಲ್ಲಿ ತೊಡಗಿಸಿಕೊಂಡಿರುವ ಕಾರಣ ಸಿದ್ಧು ರಾಜಕೀಯ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಮುನ್ನ ನವಜೋತ್ ಸಿಂಗ್ ಸಿಧು ಅವರ ಗುಂಪಿನ ನಾಯಕರ ಜೊತೆಗಿನ ಈ ಸಭೆಯು ಮತ್ತೊಮ್ಮೆ ಪಂಜಾಬ್ ಕಾಂಗ್ರೆಸ್‍ನಲ್ಲಿ ನವಜೋತ್ ಸಿಂಗ್ ಸಿದ್ಧು ವರ್ಸಸ್ ಆಲ್ ಎಂಬ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಎಂಬ ನಿರೀಕ್ಷೆ ಇದೆ.

RELATED ARTICLES

Latest News