ಬೆಂಗಳೂರು,ಏ.19- ಪ್ರಸಕ್ತ ಲೋಕಸಭಾ ಚುನಾವಣೆಯ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳ ಪ್ರಚಾರಕ್ಕೆ ಆಗಮಿಸಿರುವ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಏ.24ರ ಸಂಜೆ 6 ಗಂಟೆಯ ನಂತರ ಕ್ಷೇತ್ರ ಬಿಟ್ಟು ತೆರಳಲು ಭಾರತದ ಚುನಾವಣಾ ಆಯೋಗ ಸೂಚನೆ ನೀಡಿದೆ.
ಆಯಾ ಕ್ಷೇತ್ರದ ಮತದಾರರನ್ನು ರಾಜಕೀಯ ಪಕ್ಷದ ನಾಯಕರು, ಮುಖಂಡರು, ಕಾರ್ಯಕರ್ತರು ಬಹಿರಂಗ ಪ್ರಚಾರದ ಸಮಯ ಮುಗಿದ ಕೂಡಲೇ ತೆರಳಬೇಕು. ಕ್ಷೇತ್ರ ಬಿಟ್ಟು ತೆರಳಿರುವ ಬಗ್ಗೆ ಆಯಾ ಚುನಾವಣಾ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಹೊರಗಿನವರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದು ಸಾಮಾನ್ಯ. ಮತದಾನದ ಅವ ಮುಕ್ತಾಯವಾಗುವ 48 ಗಂಟೆಗಳ ಮುಂಚಿತ ಅವಯಲ್ಲಿ ಕ್ಷೇತ್ರದ ಮತದಾರರಲ್ಲದವರು ಆಯಾ ಕ್ಷೇತ್ರದಲ್ಲಿ ಉಪಸ್ಥಿತರಿರಬಾರದು.
ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯುವ ಉದ್ದೇಶದಿಂದ ಈ ರೀತಿಯ ಕ್ರಮ ಕೈಗೊಂಡಿದೆ. ಆಯೋಗವು ಜಿಲ್ಲಾ ಚುನಾವಣಾ ಅಧಿಕಾರಿ, ಪೊಲೀಸ್ ಅಧಿಕಾರಿಗೆ ನಿರ್ದೇಶನ ನೀಡಿದ್ದು, ಕಲ್ಯಾಣ ಮಂಟಪ, ಸಮುದಾಯ ಭವನಗಳನ್ನು ಪರಿಶೀಲಿಸಿ ಕ್ಷೇತ್ರದ ಮತದಾರರಲ್ಲದವರು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ಸೂಚಿಸಿದೆ.
ವಸತಿ ಗೃಹಗಳು, ಅತಿಥಿ ಗೃಹಗಳನ್ನು ಪರಿಶೀಲಿಸಬೇಕು. ಕ್ಷೇತ್ರದ ಗಡಿಗಳಲ್ಲಿ ಇರುವ ಚೆಕ್ ಪೋಸ್ಟ್ ಗಳಲ್ಲಿ ಹೊರಗಿನಿಂದ ಬರುವ ವಾಹನಗಳ ಚಲನವಲನಗಳ ಮೇಲೆ ನಿಗಾವಹಿಸಬೇಕು, ಗುರುತಿನಚೀಟಿಯನ್ನು ಪರಿಶೀಲಿಸಿ ಕ್ಷೇತ್ರದ ಹೊರಗಿನವರೇ ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿದೇರ್ಶಶನ ನೀಡಿದೆ. ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಿಗೆ ಏ.26ರಂದು ಮತದಾನ ನಡೆಯಲಿದ್ದು, ಏ.24ರ ಸಂಜೆ 6 ಗಂಟೆ ನಂತರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಏ.26ರಂದು ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.