Sunday, November 24, 2024
Homeರಾಷ್ಟ್ರೀಯ | Nationalದೇಶದಲ್ಲಿ ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ದೇಶದಲ್ಲಿ ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ನವದೆಹಲಿ,ಏ.19- ಲೋಕಸಭೆಯ 18ನೇ ಅವಧಿಗೆ ಇಂದು ಮೊದಲ ಹಂತದ ಮತದಾನ ನಡೆದಿದ್ದು, ದೇಶದ 21 ರಾಜ್ಯಗಳ 102 ಕ್ಷೇತ್ರಗಳಲ್ಲಿ 16 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.ಒಟ್ಟು 7 ಹಂತಗಳಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮೊದಲನೆಯ ಹಂತದಲ್ಲೇ ಅತೀ ಹೆಚ್ಚು ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ.

ಚುನಾವಣಾ ಆಯೋಗ ಇದೇ ವೇಳೆ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ವಿಧಾನಸಭೆಗಳಿಗೂ ಮತದಾನ ಆಯೋಜಿಸಿತ್ತು.ಬೆಳಿಗ್ಗೆಯಿಂದಲೇ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿರುಬೇಸಿಗೆಯ ಬಿಸಿಲು ಮಧ್ಯಾಹ್ನದ ಮೇಲೆ ಹೆಚ್ಚಾಗುವುದರಿಂದ ಬೆಳಗಿನ ಕಡಿಮೆ ಉಷ್ಣಾಂಶವಿದ್ದಾಗ ಮತದಾನ ಮಾಡಲು ಸಾರ್ವಜನಿಕರು ಆಸಕ್ತಿ ತೋರಿಸಿದ್ದಾರೆ. ಸಾಲುಗಟ್ಟಿ ಮತಗಟ್ಟೆಗಳ ಮುಂದೆ ನಿಂತು ಹಕ್ಕು ಚಲಾಯಿಸಿದ್ದಾರೆ.

ಬಳಿಕ ಮತದಾನ ಮಾಡಿದ್ದಕ್ಕಾಗಿ ನಾನು ಹೆಮ್ಮೆ ಪಡುತ್ತೇನೆ ಎಂಬ ಫೋಟೊಶೂಟ್ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಫೋಟೊ ತೆಗೆಸಿಕೊಂಡು ಸಾಕಷ್ಟು ಮಂದಿ ಖುಷಿಪಟ್ಟರು.ಮೊದಲ ಹಂತದ ಯುವ ಮತದಾರರಲ್ಲಿ ಹೆಚ್ಚಿನ ಉತ್ಸುಕತೆ ಕಂಡುಬಂದರೆ, ಹಿರಿಯ ನಾಗರಿಕರು ತಾವೇನೂ ಕಡಿಮೆಯಿಲ್ಲ ಎಂಬಂತೆ ಸಹಾಯಕರ ನೆರವಿನಲ್ಲಿ ಬಂದು ಮತ ಚಲಾಯಿಸಿದರು.

ಅರುಣಾಚಲ ಪ್ರದೇಶ ಕುರುಂಗ್ ಕುಮೆ ಜಿಲ್ಲೆಯಲ್ಲಿ ಸಶಸ್ತ್ರ ಪಡೆಗಳ ಬಿಗಿ ಪಹರೆಯಲ್ಲಿ ಸಾರ್ವಜನಿಕರು ಅದರಲ್ಲೂ ಹಿರಿಯ ನಾಗರಿಕರು ಮತದಾನ ಮಾಡಿದರು.ಮಣಿಪುರದಲ್ಲಿ ಪ್ರತಿ ಮತಗಟ್ಟೆಗೂ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿತ್ತು. ಸಾರ್ವಜನಿಕರು ನಿರ್ಭೀತಿಯಿಂದ ಮತದಾನ ಮಾಡಲು ವಿಶ್ವಾಸ ಮೂಡುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು.ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಇಂದು ಮದುವೆ ಮಂಟಪದಿಂದ ನವ ದಂಪತಿಗಳ ಜೋಡಿಯೊಂದು ಹಾರ, ತುರಾಯಿಗಳ ಜೊತೆಯಲ್ಲೇ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿರುವುದು ವಿಶೇಷವಾಗಿತ್ತು.

ಮರಳುಗಾಡು ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಹಲವು ಕಡೆ ಬಿಸಿಲಿನ ತಾಪ ತೀವ್ರ ಹೆಚ್ಚಾದ ಹಿನ್ನೆಲೆಯಲ್ಲಿ ಆಯೋಗ ಪೆಂಡಾಲ್‍ಗಳನ್ನು ಹಾಕಿ ನೆರಳಿನ ವ್ಯವಸ್ಥೆ ಮಾಡಿತ್ತು.ಪಶ್ಚಿಮ ಬಂಗಾಳದಲ್ಲಿ ಮತಗಟ್ಟೆಗಳನ್ನು ತಳಿರು-ತೋರಣ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು ಮತ್ತು ವ್ಯಾಪಕ ಬಿಗಿಭದ್ರತೆಯನ್ನು ಆಯೋಜಿಸಲಾಗಿತ್ತು. ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಮತದಾರರು ಲೋಕಸಭೆ ಹಾಗೂ ವಿಧಾನಸಭೆ ಎರಡಕ್ಕೂ ತಮ್ಮ ಹಕ್ಕು ಚಲಾಯಿಸಿದರು.

ದ್ರಾವಿಡನಾಡು ತಮಿಳುನಾಡಿನಲ್ಲಿ ಜನ ಆಸಕ್ತಿಯಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಚುನಾವಣಾ ಆಯೋಗ ಮತಗಟ್ಟೆಗಳ ವಿವರಗಳಿರುವ ಚೀಟಿಯನ್ನು ಪ್ರತಿಯೊಬ್ಬರಿಗೂ ತಲುಪಿಸಿತ್ತು. ಮತದಾನಕ್ಕೆ ಆಗಮಿಸಿದವರ ಕೈಯಲ್ಲಿ ಗುರುತಿನ ಚೀಟಿ ಹಾಗೂ ಆಯೋಗ ನೀಡಿದ ಮಾಹಿತಿ ಪತ್ರಗಳು ಗಮನ ಸೆಳೆದವು. ಅಸಕ್ತರು ಹಾಗೂ ಹಿರಿಯರಿಗಾಗಿ ಮತಕೇಂದ್ರಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಅವರಿಗೆ ನೆರವು ನೀಡಲು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು.

ಅರುಣಾಚಲ ಪ್ರದೇಶ, ಮೇಘಾಲಯದಲ್ಲಿ ತಲಾ 2, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಅಂಡಮಾನ್-ನಿಕೋಬಾರ್, ಲಕ್ಷದೀಪ್, ಪುದುಚೇರಿ, ಕ್ಷೇತ್ರಗಳಲ್ಲಿ ತಲಾ 1, ಉತ್ತರಾಖಾಂಡ್‍ನಲ್ಲಿ 5 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಈ ಭಾಗದಲ್ಲಿ ಇರುವ ಎಲ್ಲಾ ಕ್ಷೇತ್ರಗಳಿಗೂ ಮೊದಲ ಅವಯಲ್ಲೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದೆ. ಉಳಿದಂತೆ ಅಸ್ಸಾಂನ 14 ಕ್ಷೇತ್ರಗಳಲ್ಲಿ 5 ಕ್ಕೆ, ಬಿಹಾರದ 40 ಕ್ಷೇತ್ರಗಳಲ್ಲಿ 4 ಕ್ಕೆ, ಛತ್ತೀಸ್‍ಗಡದ 11 ಕ್ಷೇತ್ರಗಳಲ್ಲಿ 1 ಕ್ಕೆ, ಮಧ್ಯಪ್ರದೇಶದ 21 ಕ್ಷೇತ್ರಗಳಲ್ಲಿ 6ಕ್ಕೆ, ಮಹಾರಾಷ್ಟ್ರದ 48 ಕ್ಷೇತ್ರಗಳಲ್ಲಿ 5 ಕ್ಕೆ, ಮಣಿಪುರದಲ್ಲಿ 2 ಕ್ಷೇತ್ರಗಳ ಪೈಕಿ 1 ಮತ್ತು ಅರ್ಧ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.ರಾಜಸ್ಥಾನದ 25 ರಲ್ಲಿ 12 ಕ್ಕೆ ಮತದಾನ ನಡೆದರೆ, ತಮಿಳುನಾಡಿನ 39 ಕ್ಷೇತ್ರಗಳಿಗೂ ಮೊದಲ ಹಂತದಲ್ಲೇ ಚುನಾವಣಾ ನಡೆದಿದೆ.

ಉತ್ತರ ಪ್ರದೇಶದ 80 ರ ಪೈಕಿ 8 ಕ್ಷೇತ್ರಗಳಿಗೆ, ಪಶ್ಚಿಮಬಂಗಾಳದ 42 ಕ್ಷೇತ್ರಗಳ ಪೈಕಿ 3ಕ್ಕೆ, ಜಮ್ಮು-ಕಾಶ್ಮೀರದ 5 ಕ್ಷೇತ್ರಗಳ ಪೈಕಿ 1 ಕ್ಕೆ ಮತದಾನ ನಡೆದಿದೆ.ಮೊದಲ ಹಂತದ ಚುನಾವಣೆಗೆ 1.87 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 18 ಲಕ್ಷ ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು.

ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸಲು ಮುಕ್ತ, ನಿಸ್ಪಕ್ಷಪಾತ, ಶಾಂತಿಯುತ, ನಿರ್ಭೀತ ಮತ್ತು ಸುಲಭ ಮತದಾನಕ್ಕೆ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನೆರವಿನಲ್ಲಿ ಆಯೋಗ ಬಿಗಿ ಕ್ರಮಗಳನ್ನು ಕೈಗೊಂಡಿತ್ತು.

ಅರುಣಾಚಲ ಪ್ರದೇಶ ಹಾಗೂ ಮತ್ತಿತರ ಕಡೆಗಳಲ್ಲಿ ದುರ್ಗಮ ಪ್ರದೇಶಗಳಿಗೆ ತಲುಪಲು ಆಯೋಗ ಸಿಬ್ಬಂದಿ ಹರಸಾಹಸ ಪಟ್ಟಿರುವ ವಿಡಿಯೋವನ್ನು ಹಂಚಿಕೊಂಡಿರುವ ಚುನಾವಣಾ ಆಯೋಗ ಪ್ರಜಾಪ್ರಭುತ್ವದ ಸ್ಥಿರತೆಗೆ ತಮ್ಮ ಬದ್ಧತೆಯನ್ನು ದೃಢಪಡಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ.

ಇಂದು ಚುನಾವಣೆ ನಡೆದ ಲೋಕಸಭಾ ಕ್ಷೇತ್ರಗಳಲ್ಲಿ 73 ಸಾಮಾನ್ಯ ಕ್ಷೇತ್ರಗಳಾಗಿದ್ದರೆ, 11 ಪರಿಶಿಷ್ಟ ಪಂಗಡ, 18 ಪರಿಶಿಷ್ಟ ಜಾತಿ ಕ್ಷೇತ್ರಗಳಾಗಿವೆ. ಅರುಣಾಚಲ ಪ್ರದೇಶ, ಸಿಕ್ಕಿಂನ 92 ವಿಧಾನಸಭಾ ಕ್ಷೇತ್ರಗಳಿಗೆ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೂ ಮತದಾನ ನಡೆದಿದೆ.

RELATED ARTICLES

Latest News