ಬೆಂಗಳೂರು,ಅ.11- ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದ್ದ ಅನುದಾನವನ್ನು ಸರ್ಕಾರ ವಾಪಸ್ ಪಡೆದಿದೆ ಎಂದು ಆರೋಪಿಸಿ ಬಿಜೆಪಿ ಶಾಸಕ ಮುನಿರತ್ನ ವಿಧಾನಸೌಧ, ವಿಕಾಸಸೌಧ ನಡುವೆ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಇಂದು ಕೆಲಕಾಲ ಧರಣಿ ನಡೆಸಿದರು.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ರದ್ದುಗೊಳಿಸಿ ಬೇರೆ ಕ್ಷೇತ್ರಕ್ಕೆ ಕೊಟ್ಟಿರುವುದು ನ್ಯಾಯವೇ ಎಂದು ಪ್ರಶ್ನಿಸುವ ಫಲಕವನ್ನು ಹಿಡಿದು ಧರಣಿ ನಡೆಸಿದರು. ಆ ಫಲಕದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಭಾವಚಿತ್ರವೂ ಇತ್ತು.
ಇಂದಿರಾ ಕ್ಯಾಂಟಿನ್ ರೀ ಓಪನ್‍ಗೆ ಅಡ್ಡಿಯಾಯ್ತೇ ಗ್ಯಾರಂಟಿ ಯೋಜನೆಗಳು..?
ಆರಂಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮುನಿರತ್ನ ಅವರನ್ನು ಬೆಂಬಲಿಸಿ ಧರಣಿ ನಡೆಸಲು ಮುಂದಾದರು. ಮಾಜಿ ಮೇಯರ್ ನಾರಾಯಣಸ್ವಾಮಿ, ಮಾಜಿ ಪಾಲಿಕೆ ಸದಸ್ಯಜಿ.ಕೆ.ವೆಂಕಟೇಶ್ ಸೇರಿದಂತೆ ಹಲವರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಆದರೆ ಪೊಲೀಸರು ಮುನಿರತ್ನ ಅವರನ್ನು ಬಿಟ್ಟು ಉಳಿದ ಕಾರ್ಯಕರ್ತರಿಗೆ ಧರಣಿ ಮಾಡಲು ಅವಕಾಶ ನೀಡದೆ, ಶಾಸಕರು, ಮಾಜಿ ಶಾಸಕರನ್ನು ಹೊರತುಪಡಿಸಿ ಉಳಿದವರಿಗೆ ಇಲ್ಲಿ ಧರಣಿ ನಡೆಸಲು ಅವಕಾಶವಿಲ್ಲ ಎಂದು ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ, ಶಾಸಕ ಮುನಿರತ್ನ ಅವರನ್ನು ಧರಣಿ ಹಿಂಪಡೆಯುವಂತೆ ಮನವೊಲಿಸಿದರು. ಬಿಎಸ್‍ವೈ ಮಾತಿಗೆ ಗೌರವ ಕೊಟ್ಟು ಪ್ರತಿಭಟನೆಯನ್ನು ಹಿಂಪಡೆದರು. ಇದಕ್ಕೂ ಮುನ್ನ ತಮ್ಮ ಕ್ಷೇತ್ರಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಅನುದಾನವನ್ನು ಮರಳಿ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಬಾವುಟ ಹಿಡಿದು ಮುನಿರತ್ನ ಅವರು ಏಕಾಂಗಿಯಾಗಿ ಧರಣಿ ನಡೆಸಿದರು.