Friday, November 22, 2024
Homeರಾಜಕೀಯ | Politicsಗ್ಯಾರಂಟಿ ಯೋಜನೆಗಳಿಂದ ಮೈತ್ರಿ ನಾಯಕರು ಕಂಗೆಟ್ಟಿದ್ದಾರೆ : ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳಿಂದ ಮೈತ್ರಿ ನಾಯಕರು ಕಂಗೆಟ್ಟಿದ್ದಾರೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಏ.19- ಗ್ಯಾರಂಟಿ ಯೋಜನೆಗಳು ಬಡವರಿಗೆ ಶಕ್ತಿ ತುಂಬುತ್ತಿವೆ. ಇದನ್ನು ಕಂಡು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ಕಂಗೆಟ್ಟಿದ್ದಾರೆ. ಅದಕ್ಕಾಗಿ ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೆ ಖಜಾನೆ ಖಾಲಿಯಾಗಲಿದೆ ಎಂದು ಹೇಳುತ್ತಿದ್ದರು, ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಮೇಲೆ ಇದು ತಾತ್ಕಾಲಿಕ, ಲೋಕಸಭಾ ಚುನಾವಣೆ ಬಳಿಕ ಸ್ಥಗಿತಗೊಳ್ಳುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

ನಾವು ಬಿಜೆಪಿಯವರಂತಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಜೆಟ್ನಲ್ಲಿ 52 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇವೆ. ಇಡೀ ಅವ ಪೂರ್ತಿ ಯೋಜನೆಗಳು ಜಾರಿಗೊಳ್ಳುತ್ತವೆ. 2028 ರ ವಿಧಾನಸಭಾ ಚುನಾವಣೆಯಲ್ಲೂ ನಮ್ಮ ಪಕ್ಷವೇ ಅಧಿಕಾರಕ್ಕೆ ಮರಳಲಿದೆ. ಅನಂತರವೂ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ ಎಂದು ಹೇಳಿದರು.

ಬಿಜೆಪಿಯವರು 2018 ರ ವಿಧಾನಸಭಾ ಚುನಾವಣೆ, 2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಕೇಂದ್ರದಲ್ಲಿ 10 ವರ್ಷ ಆಡಳಿತ ಮಾಡಿದ ಮೋದಿ ಸರ್ಕಾರ ಬಡವರಿಗೆ ಯಾವುದೇ ಸಹಾಯ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ತೆರಿಗೆ ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿ ಸರ್ಕಾರ ಕನ್ನಡನಾಡಿಗೆ ದ್ರೋಹ ಬಗೆದಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಘೋಷಿಸಿದ್ದ ಹಣವನ್ನೂ ಬಿಡುಗಡೆ ಮಾಡಿಲ್ಲ. ರಾಜ್ಯದ ಜನರಿಗೆ ಇದು ಅರ್ಥವಾಗಿದೆ. ಹೀಗಾಗಿ ಕಾಂಗ್ರೆಸ್ಗೆ ಜನರು ವ್ಯಾಪಕವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ಕ್ಷೇತ್ರಗಳಲ್ಲಂತೂ ಅನಿರೀಕ್ಷಿತ ಮುನ್ನಡೆ ಕಂಡುಬರುತ್ತಿದೆ. ಲೋಕಸಭೆಯಲ್ಲಿ 20 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ್ ಅನ್ಯ ಕಾರಣಗಳಿಂದ ಕಾಂಗ್ರೆಸ್ ಬಿಟ್ಟು ಹೋಗಿದ್ದರು. ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿರುವವರು ಇರಲು ಸಾಧ್ಯವಾಗುವುದಿಲ್ಲ. ಅದು ಅರಿವಾಗಿ ಇಂದು ವಾಪಸ್ ಬಂದಿದ್ದಾರೆ. ಕಾಂಗ್ರೆಸ್ ಸೇರಿರುವುದು ಅವರ ಒಳ್ಳೆಯ ತೀರ್ಮಾನ. ಕಲಬುರಗಿಯಲ್ಲಷ್ಟೇ ಅಲ್ಲ, ರಾಜ್ಯಾದ್ಯಂತ ಅವರ ಪ್ರಭಾವ ಇದೆ ಎಂದರು.

ಕಾಂಗ್ರೆಸ್ ಬಿಟ್ಟು ಹೋಗದಂತೆ ಈ ಮೊದಲೇ ಅವರಿಗೆ ಸಲಹೆ ನೀಡಿದ್ದೆ. ಒಂದು ವೇಳೆ ವಾಪಸ್ ಬರುವುದಾದರೆ ಮುಕ್ತ ಆಹ್ವಾನವಿದೆ ಎಂದು ಆಗಲೇ ತಿಳಿಸಿದ್ದೆ ಎಂದು ಹೇಳಿದರು. ಶಾರದಾ ಮೋಹನಶೆಟ್ಟಿ ಮತ್ತು ಮಾಲಿಕಯ್ಯ ಗುತ್ತೇದಾರ್ರವರ ಸೇರ್ಪಡೆಯಿಂದ ಉತ್ತರಕನ್ನಡ ಮತ್ತು ಕಲಬುರಗಿ ಭಾಗಗಳಲ್ಲಿ ನಮ್ಮ ಕ್ಷೇತ್ರದ ಶಕ್ತಿ ಹೆಚ್ಚಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ ಎಂದರು.

RELATED ARTICLES

Latest News