ನವದೆಹಲಿ, ಡಿ.22- ಬಾಂಗ್ಲಾದ ಮಧ್ಯಂತರ ಸರ್ಕಾರದ ವಿರುದ್ಧ ಅಲ್ಲಿನ ಮಾಜಿ ಪ್ರಧಾನಿ ಶೇಖ್ ಹಸೀನಾ ತಮ ಅಸಮಾಧಾನ ಹೊರ ಹಾಕಿದ್ದಾರೆ. ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರದ ವಿಚಾರವಾಗಿ ಭಾರತದಲ್ಲಿ ರಕ್ಷಣೆ ಪಡೆದುಕೊಂಡಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಬಾಂಗ್ಲಾದಲ್ಲಿ ಬಲವಿಲ್ಲದ ಮುಹಮ್ಮದ್ ಯೂನಸ್ ನೇತೃತ್ವದ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ವಿಫಲವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಇಂಕಿಲಾಬ್ ಮೊಂಚೊ ಸಂಚಾಲಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬಳಿಕ ಉಂಟಾಗಿರುವ ಅಶಾಂತಿಯು ಮಧ್ಯಂತರ ಸರ್ಕಾರದ ಕಾನೂನು ಸುವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಹಿಂಸಾಚಾರದ ನಂತರ ಢಾಕಾ ಸಾಮಾನ್ಯ ಸ್ಥಿತಿಗೆ ಮರಳಲು ಹೆಣಗಾಡುತ್ತಿದೆ. ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ರಾಜಧಾನಿ ಢಾಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹೊಸ ಸಂಘರ್ಷಗಳಿಗೆ ದಾರಿ ಮಾಡಿಕೊಟ್ಟಿದೆ. ಇದರ ನಡುವೆ ಧರ್ಮನಿಂದನೆ ಆರೋಪ ಹೊತ್ತಿದ್ದ ಹಿಂದೂ ವ್ಯಕ್ತಿಯೊಬ್ಬನನ್ನು ಜನರ ಗುಂಪು ಥಳಿಸಿ ಹತ್ಯೆ ಮಾಡಿತ್ತು.
ಇದನ್ನು ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರ ಖಂಡಿಸಿತ್ತು. ನವ ಬಾಂಗ್ಲಾದೇಶದಲ್ಲಿ ಅಂತಹ ಹಿಂಸಾಚಾರಕ್ಕೆ ಎಂದಿಗೂ ಜಾಗವಿಲ್ಲ. ಈ ಕ್ರೂರ ಅಪರಾಧದಲ್ಲಿ ಭಾಗಿಯಾಗಿರುವ ಯಾರಿಗೂ ವಿನಾಯಿತಿ ಕೊಡಲ್ಲ. ಕೃತ್ಯದಲ್ಲಿ ಭಾಗಿಯಾಗಿರುವ ಯಾರನ್ನೂ ಸುಮ್ಮನೆ ಬಿಡಲ್ಲ ಎಂದು ಸರ್ಕಾರ ಹೇಳಿಕೊಂಡಿತ್ತು.
ಇದರ ಬೆನ್ನಲ್ಲೇ ಮಾಜಿ ಪ್ರಧಾನಿ ಶೇಖ್ ಹಸೀನಾ ಪ್ರತಿಕ್ರಿಯಿಸಿದ್ದಾರೆ. 2024ರಲ್ಲಿ ಬಾಂಗ್ಲಾ ಸರ್ಕಾರದ ವಿರುದ್ಧದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಶೇಖ್ ಹಸೀನಾ ಅವರು ಬೇರೆ ದಾರಿ ಕಾಣದೇ ತಮ್ಮ ಪ್ರಧಾನಿ ಪದವಿಗೆ ರಾಜೀನಾಮೆ ನೀಡಿದ್ದರು. ಕಳೆದ ವರ್ಷ ಆಗಸ್ಟ್ 5ರಂದು ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಬಂದು ಇಲ್ಲೇ ಆಶ್ರಯ ಪಡೆದಿದ್ದಾರೆ.
