ಬೆಂಗಳೂರು, ಡಿ.22- ಅಧಿಕಾರ ಹಂಚಿಕೆ ಗೊಂದಲಗಳು ಗರಿ ಗೆದರಿರುವ ಸಂದರ್ಭದಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂದು ದೆಹಲಿಯತ್ತ ಮುಖ ಮಾಡಿದ್ದಾರೆ. ಹೈಕಮಾಂಡ್ ಸಮುಖದಲ್ಲಿ ಚರ್ಚೆಗೆ ವೇದಿಕೆ ಸಜ್ಜುಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಅಧಿಕಾರ ಹಂಚಿಕೆಯ ವಿಚಾರದಲ್ಲಿ ಹೈಕಮಾಂಡ್ ನೀಡುವ ನಿರ್ದೇಶನಕ್ಕೆ ತಾವು ಬದ್ಧ ಎಂದು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರ ನಡುವೆಯೂ ರಾಮನಗರದ ಇಕ್ಬಾಲ್ ಹುಸೇನ್ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಪುನರುಚ್ಚರಿಸಿದ್ದಾರೆ.
ನಾಯಕತ್ವ ಬದಲಾವಣೆಯ ಕುರಿತಂತೆ ಕಳೆದ ತಿಂಗಳು ಭಾರೀ ಬೆಳವಣಿಗೆಗಳಾಗಿದ್ದವು. ಡಿ.ಕೆ.ಶಿವಕುಮಾರ್ ಬೆಂಬಲಿಗ ಶಾಸಕರು ದೆಹಲಿ ಯಾತ್ರೆ ನಡೆಸಿದ್ದರು. ಆದ್ದರಿಂದ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿತ್ತು. ಕೊನೆಗೆ ಉಪಾಹಾರಕೂಟಗಳ ಮೂಲಕ ಪರಿಸ್ಥಿತಿ ಶಮನಗೊಳಿಸಲಾಗಿದೆ.
ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರು ನಮಿಬ್ಬರಿಗೆ ಏನೋ ಹೇಳಿದ್ದಾರೆ. ಅದರ ಬಗ್ಗೆ ದೆಹಲಿಗೆ ಹೋಗಿ ಚರ್ಚೆ ಮಾಡಿ ಪರಿಹಾರ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ಯಾವಾಗ ಕರೆದರೂ ದೆಹಲಿಗೆ ಭೇಟಿ ಹೋಗಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಪಟ್ಟ ಕಟ್ಟಬೇಕು ಎಂದು ಕೆಲವರು ಪ್ರಯತ್ನ ಪಡುತ್ತಿದ್ದಾರೆ.
ಇದಕ್ಕೆ ಪ್ರತಿ ತಂತ್ರವಾಗಿ ಸಿದ್ದರಾಮಯ್ಯ ಅವರ ಬಣದಲ್ಲಿರುವ ಸಚಿವರು ಶಾಸಕರು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಅವರನ್ನು ಕೆಳಗಿಳಿಸಬೇಕು ಮತ್ತು ಹೆಚ್ಚುವರಿಯಾಗಿ ಜಾತಿವಾರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಲಾಬಿ ನಡೆಸುತ್ತಿದ್ದಾರೆ. ತಂತ್ರ ಪ್ರತಿತಂತ್ರಗಳಿಂದಾಗಿ ರಾಜ್ಯ ರಾಜಕಾರಣದಲ್ಲಿ ಗೊಂದಲಮಯ ವಾತಾವರಣ ಇದೆ.
ಬೆಳಗಾವಿಯ ಅಧಿವೇಶನದ ನಡುವೆ ದೆಹಲಿಯಲ್ಲಿ ನಡೆದ ಮತಗಳ್ಳತನದ ವಿರುದ್ಧದ ಪ್ರತಿಭಟನೆಯಲ್ಲಿ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಚರ್ಚೆಗೆ ಹೆಚ್ಚಿನ ಸಮಯ ಸಿಕ್ಕಿರಲಿಲ್ಲ ಎನ್ನಲಾಗಿದೆ.
ಈಗ ದೆಹಲಿಗೆ ಭೇಟಿ ನೀಡಿರುವ ಡಿ.ಕೆ.ಶಿವಕುಮಾರ್ ಅವರಿಗೆ ಸರಣಿ ಕಾರ್ಯಕ್ರಮಗಳು ನಿಗದಿಯಾಗಿವೆ. ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ದೇಣಿಗೆ ನೀಡಿದ್ದಕ್ಕೆ ದೆಹಲಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದು, ಖುದ್ದು ಹೇಳಿಕೆ ನೀಡುವಂತೆ ನೋಟೀಸ್ ನೀಡಿದ್ದಾರೆ. ಡಿ.ಕೆ. ಸಹೋದರರು ದೆಹಲಿ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಲೇಬೇಕಿದೆ. ಇದು ಆದ್ಯತೆಯ ಕೆಲಸವಾಗಿದೆ. ನಾಳೆ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ್ ನೇತೃತ್ವದಲ್ಲಿ ನದಿ ಜೋಡಣೆಗೆ ಸಂಬಂಧಪಟ್ಟಂತೆ ರಾಷ್ಟ್ರಮಟ್ಟದ ಉನ್ನತ ಸಭೆ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಿ ನದಿಗಳ ಜೋಡಣೆಯ ಬಗ್ಗೆ ಡಿಕೆ ಶಿವಕುಮಾರ್ ರಾಜ್ಯದ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ಅದರ ಜೊತೆಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮೇಕೆದಾಟು, ಕಳಸಾ ಬಂಡೂರಿ, ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆ, ಎತ್ತಿನಹೊಳೆ ಏತ ನೀರಾವರಿ ಯೋಜನೆ ಮುಂದುವರೆಸಲು ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ಸೇರಿದಂತೆ ಹಲವಾರು ವಿಚಾರಗಳನ್ನು ಚರ್ಚಿಸಲಿದ್ದಾರೆ. ನಗರಾಭಿವೃದ್ಧಿ ಸಚಿವರನ್ನು ಭೇಟಿ ಮಾಡಿ ಬೆಂಗಳೂರು ಮತ್ತು ಅದರ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆಗೆ ಶೇ.50ರಷ್ಟು ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಲಿದ್ದಾರೆ.
ಹೈಕಮಾಂಡ್‌ಗೆ ಇಕ್ಕಟ್ಟು:
ಆಂತರಿಕ ಭಿನ್ನಮತಗಳಿಂದಾಗಿ ಈಗಾಗಲೇ ಮಧ್ಯ ಪ್ರದೇಶ, ರಾಜಸ್ಥಾನ, ರಾಜಸ್ಥಾನ, ಪಂಜಾಬ್ ಸೇರಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಅಲ್ಲಿ ಹೈಕಮಾಂಡ್ ತೆಗೆದುಕೊಂಡ ನಿರ್ಣಯಗಳು ಕಾಂಗ್ರೆಸ್‌ಗೆ ದುಬಾರಿಯಾಗಿವೆ. ಕರ್ನಾಟಕದಲ್ಲಿ ಸ್ಥಳೀಯ ನಾಯಕತ್ವದ ಕಾರಣಕ್ಕೆ ಕಾಂಗ್ರೆಸ್ ಅದ್ವಿತೀಯ ಬಹುಮತ ಪಡೆದಿದೆ. ಈಗ ಇಲ್ಲಿಯೂ ಗೊಂದಲಗಳಾಗುತ್ತಿರುವುದು ಹೈಕಮಾಂಡ್‌ಗೆ ಬಿಸಿ ತುಪ್ಪವಾಗಿದೆ. ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ನೀಡಿದರೆ, ರಾಜ್ಯ ರಾಜಕಾರಣದ ಮೇಲಷ್ಟೆ ಅಲ್ಲದೆ ರಾಷ್ಟ್ರ ರಾಜಕಾರಣದ ಮೇಲೂ ಭಾರೀ ಪರಿಣಾಮವಾಗುವ ಆತಂಕವನ್ನು ಕಾಂಗ್ರೆಸ್ ವರಿಷ್ಠರು ಹೊಂದಿದ್ದಾರೆ.
ಹಾಗಾಗಿ ಅಧಿಕಾರ ಹಂಚಿಕೆಯ ರಗಳೆಯಿಂದ ದೂರ ಇರಲು ವರಿಷ್ಠರು ನಿರ್ಧರಿಸಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಪಟ್ಟು ಬಿಡದೆ ತಮ ಪ್ರಯತ್ನ ಮುಂದುವರೆಸಿದ್ದಾರೆ.
ದೆಹಲಿಯಲ್ಲಿ ಕಸರತ್ತು:
ಇಂದು ದೆಹಲಿಗೆ ತೆರಳಲಿರುವ ಡಿ.ಕೆ.ಶಿವಕುಮಾರ್ ಅಲ್ಲಿ ಎಐಸಿಸಿ ನಾಯಕರಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆೇವಾಲ ಅವರನ್ನು ಭೇಟಿ ಮಾಡಲಿದ್ದಾರೆ.
ಅಧಿಕಾರ ಹಂಚಿಕೆಯ ಗೊಂದಲಗಳ ವಿಚಾರವಾಗಿ ಹೈಕಮಾಂಡ್ ಮಧ್ಯ ಪ್ರವೇಶಿಸುವುದಿಲ್ಲ. ಗೊಂದಲ ಸೃಷ್ಟಿಸಿರುವುದು ರಾಜ್ಯದ ನಾಯಕರು, ಹೀಗಾಗಿ ಸ್ಥಳೀಯವಾಗಿಯೇ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿನ್ನೆ ಹೇಳಿದ ಬಳಿಕ ಡಿ.ಕೆ.ಶಿವಕುಮಾರ್ ಅವರ ಪ್ರಯತ್ನಗಳಿಗೆ ಹಿನ್ನೆಡೆಯಾದಂತಾಗಿದೆ.
ಈ ಹಿನ್ನೆಲೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ದೆಹಲಿ ಮಟ್ಟದಲ್ಲಿ ಸಂಧಾನ ಸಭೆಗೆ ವೇದಿಕೆ ಅಣಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.ರಾಜ್ಯಮಟ್ಟದಲ್ಲಿ ಇದು ಇತ್ಯರ್ಥವಾಗದ ವಿಚಾರ. ಹೈಕಮಾಂಡ್ ನಾಯಕರೇ ತೀರ್ಮಾನ ನೀಡಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಪ್ರತಿಪಾದನೆಯಾಗಿದೆ. ಇದೇ ತಿಂಗಳ 27ರಂದು ದೆಹಲಿಯಲ್ಲಿ ಎಐಸಿಸಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ದೆಹಲಿಗೆ ಭೇಟಿ ನೀಡಬೇಕಿದೆ. ಆ ವೇಳೆಗೆ ಸಂಧಾನ ಸಭೆಗೆ ವೇದಿಕೆ ಸಜ್ಜುಗೊಳಿಸಲು ಬೇಕಿರುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ಗೊಂದಲಗಳನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಖರ್ಗೆಯವರು ಹೇಳಿದ ಹೊರತಾಗಿಯೂ ಸಂಧಾನಕ್ಕೆ ದೆಹಲಿಯಲ್ಲಿ ನಾನಾ ರೀತಿಯ ಕಸರತ್ತುಗಳು ನಡೆಯುತ್ತಿವೆ.
