ಬೆಂಗಳೂರು,ಏ.20- ಲೋಕಸಭಾ ಚುನಾವಣೆಗೆ ಮತದಾನ ಸಮೀಪಿಸುತ್ತಿರುವಂತೆ ಕಾಂಗ್ರೆಸ್ ನಾಯಕರು ಪ್ರಚಾರಕಣದಲ್ಲಿ ರಣೋತ್ಸಾಹ ಪ್ರದರ್ಶಿಸುತ್ತಿದ್ದಾರೆ. ಇದೇ 23 ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ನ ಸ್ಟಾರ್ ಪ್ರಚಾರಕರು ಪ್ರಿಯಾಂಕ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ಚಿತ್ರದುರ್ಗ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲಿದ್ದಾರೆ.
ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲೆ ಮೈದಾನದಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರವಾಗಿ ಮತ ಯಾಚಿಸಿದರೆ, ಬೆಂಗಳೂರಿನ ಎಚ್ಎಸ್ಆರ್ ಬಡಾವಣೆಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಂಡು ಸೌಮ್ಯರೆಡ್ಡಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಏ.22 ರಂದು ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಚನ್ನಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಮತ ಯಾಚಿಸಿದರೆ, ಯಲಹಂಕದ ಮಾದನಾಯಕನಹಳ್ಳಿ ಸರ್ಕಲ್ನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿಕ್ಕಬಳ್ಳಾಪುರ ಕ್ಷೇತ್ರದ ರಕ್ಷಾ ರಾಮಯ್ಯ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಪ್ರಜಾಧ್ವನಿ ಯಾತ್ರೆಯನ್ನು ಮುಂದುವರೆಸಿದ್ದು, ನಾಳೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಂಗಾರಪೇಟೆ, ಶಿಡ್ಲಘಟ್ಟದಲ್ಲಿ ಹಾಗೂ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲ ಒಟ್ಟು ನಾಲ್ಕು ಬಹಿರಂಗ ಸಮಾವೇಶಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.