ಬೆಂಗಳೂರು,ಡಿ.22-ಕಳೆದ ಕೆಲವು ದಿನಗಳ ಹಿಂದೆ ಹಾಸನ, ತುಮಕೂರು ಸೇರಿದಂತೆ ವಿವಿಧ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಇದೀಗ ಹಾಸನ ಜಿಲ್ಲೆಯ ಆಲೂರು ಹಾಗೂ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕು ಕಚೇರಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.
ಸರಗೂರು ತಾಲ್ಲೂಕು ಕಚೇರಿಗೆ ಇ-ಮೇಲ್ ಮೂಲಕ ಇಂದು ಬೆಳಗ್ಗೆ ಬಾಂಬ್‌ಸ್ಪೋಟದ ಬೆದರಿಕೆ ಸಂದೇಶ ಬಂದಿದ್ದು, ಆತಂಕ ಸೃಷ್ಟಿಯಾದ ಕೂಡಲೇ ಶ್ವಾನದಳ, ಬಾಂಬ್ ಪತ್ತೆದಳ ಹಾಗೂ ಪೊಲೀಸರು ಅಲರ್ಟ್ ಆಗಿ ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಚೇರಿಯ ಆವರಣ ಸೇರಿದಂತೆ ಕೊಠಡಿಗಳಲ್ಲೂ ಇಂಚಿಂಚೂ ಶೋಧ ನಡೆಸಿದಾಗ ಯಾವುದೇ ಸ್ಪೋಟದ ವಸ್ತುಗಳು ಕಂಡು ಬಂದಿಲ್ಲ. ಇದು ಹುಸಿ ಸಂದೇಶ ಎಂದು ತಿಳಿದು ಆತಂಕ ದೂರವಾಗಿದೆ.
ಈ ನಡುವೆ ಇಂದು ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ತೆರಳಿದ್ದ ಬೆನ್ನಲ್ಲೇ ಬಾಂಬ್‌ಸ್ಪೋಟ ಸಂದೇಶ ಬಂದಿದ್ದು, ಕೆಲಕಾಲ ತಾಲ್ಲೂಕಿನಾದ್ಯಂತ ಆತಂಕ ಮನೆ ಮಾಡಿತ್ತು.ಅದೇ ರೀತಿ ಹಾಸನ ಜಿಲ್ಲೆಯ ಆಲೂರು ತಾಲ್ಲೂಕು ಕಚೇರಿಗೂ ಸಹ ಇಂದು ಬೆಳಗ್ಗೆ ಇ-ಮೇಲ್‌ನಲ್ಲಿ ಬಾಂಬ್‌ಸ್ಪೋಟದ ಬೆದರಿಕೆ ಸಂದೇಶ ಬಂದಿರುವುದು ಗಮನಿಸಿ ಸಿಬ್ಬಂದಿಗಳು ಆತಂಕಕಿಡಾಗಿದ್ದರು.
ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಯಾವುದೇ ಸ್ಪೋಟಕ ವಸ್ತುಗಳು ಕಂಡು ಬಂದಿಲ್ಲ. ಇದು ಕೂಡ ಹುಸಿ ಸಂದೇಶ ಎಂಬುವುದು ದೃಡಪಟ್ಟಿದೆ. ಈ ಎರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸ ಲಾಗಿದೆ. ಈ ಹುಸಿ ಸಂದೇಶ ಕಳುಹಿಸಿದವರು ಯಾರೂ, ಎಲ್ಲಿಂದ ಕಳುಹಿಸಲಾಗಿದೆ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
