ಮೈಸೂರು, ಏ. 21– ಬಹಿಷ್ಕಾರಕ್ಕೆ ಒಳಗಾದ ಕುಟುಂಬದಲ್ಲಿ ಸಾವನ್ನಪ್ಪಿದ ವಿಕಲತೇಚನ ಯುವಕನ ಅಂತ್ಯಸಂಸ್ಕಾರಕ್ಕೆ ಪೋಷಕರು ಪರದಾಡಿದ ಅಮಾನವೀಯ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕು ತರಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಯುವಕನ ಅಂತ್ಯಸಂಸ್ಕಾರಕ್ಕೆ ಗ್ರಾಮದಲ್ಲಿ ಅವಕಾಶ ನೀಡದ ಹಿನ್ನಲೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಮೃತದೇಹಕ್ಕೆ ಮುಕ್ತಿ ದೊರಕಿಸಿದ್ದಾರೆ.
ಜಿಲ್ಲಾಧಿಕಾರಿಗಳ ಮೌಖಿಕ ಆದೇಶಕ್ಕೆ ತಹಸೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಮುಖಂಡರ ಮನ ಒಲಿಸಿ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಯಿತು.ತರಗನಹಳ್ಳಿಯ ವಾಸಿ ಕುಳ್ಳನಾಯಕನ ಕುಟುಂಬದ ಮೇಲೆ ನಾಲ್ಕು ವರ್ಷಗಳ ಹಿಂದೆ ಮುಖಂಡರು ಬಹಿಷ್ಕಾರ ಹೇರಿದ್ದರು.
ಬಹಿಷ್ಕಾರವನ್ನ ತೆರವುಗೊಳಿಸಲು ಕುಳ್ಳನಾಯಕ ಸರ್ಕಾರಿ ಕಚೇರಿಗೆ ಸಾಕಷ್ಟು ಬಾರಿ ಅಲೆದಾಡಿದ್ದರು. ತಾಲ್ಲೂಕು ಆಡಳಿತ ಸೂಕ್ತವಾಗಿ ಸ್ಪಂದಿಸಿರಲಿಲ್ಲ.ಕುಳ್ಳನಾಯಕನ ಮಗ ಮಾದೇಶ ಮೃತಪಟ್ಟಿದ್ದಾನೆ.ಅಂತ್ಯಸಂಸ್ಕಾರ ಮಾಡಲು ಗ್ರಾಮದಲ್ಲಿ ಅವಕಾಶ ನೀಡಿಲ್ಲ ಹಾಗೂ ಯಾರೂ ಸಹ ಮುಂದೆ ಬಂದಿಲ್ಲ.ಇದರಿಂದ ನೊಂದ ಕುಳ್ಳನಾಯಕ ಮಗನ ಮೃತದೇಹವನ್ನ ಜಿಲ್ಲಾಧಿಕಾರಿಗಳ ಕಚೇರಿಗೆ ಕೊಂಡೊಯ್ಯಲು ಮುಂದಾಗಿದ್ದಾನೆ.
ಈ ಮಾಹಿತಿ ಅರಿತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕುಳ್ಳನಾಯಕನ ಪರಿಸ್ಥಿತಿ ಅರಿತು ಕೂಡಲೇ ತಹಸೀಲ್ದಾರ್ ಗೆ ಸೂಚನೆ ನೀಡಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.ಎಚ್ಚೆತ್ತ ತಹಸೀಲ್ದಾರ್ ಗ್ರಾಮದ ಮುಖಂಡರ ಮನ ಒಲಿಸಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾರೆ.
21 ನೇ ಶತಮಾನಕ್ಕೆ ಕಾಲಿಟ್ಟರೂ ಬಹಿಷ್ಕಾರದ ಪಿಡುಗಿನಿಂದ ಹೊರಬರಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶದಿಂದ ಸಧ್ಯ ಅಂತ್ಯಕ್ರಿಯೆ ನಡೆಸಲಾಗಿದ್ದು ಮೃತದೇಹಕ್ಕೆ ಮುಕ್ತಿ ನೀಡಲಾಗಿದೆ.