ಬೆಂಗಳೂರು,ಏ.22- ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ನಾಲ್ಕೇ ದಿನಗಳು ಬಾಕಿ ಇರುವಂತೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಅಭ್ಯರ್ಥಿಗಳಿಗೆ ಪತ್ರ ಬರೆದಿದ್ದಾರೆ.
ಮೈಸೂರು-ಕೊಡಗು ಅಭ್ಯರ್ಥಿ ಯದುವೀರ ನರಸಿಂಹದತ್ತ ಒಡೆಯರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಸಿ.ಎನ್.ಮಂಜುನಾಥ್ ಹಾಗೂ ದಕ್ಷಿಣ ಕನ್ನಡದಿಂದ ಮೊದಲ ಬಾರಿಗೆ ಸ್ಪರ್ಧೆ ಮಾಡಿರುವ ಬೃಜೇಶ್ ಚೌತಲ ಅವರಿಗೆ ಖುದ್ದು ಪ್ರಧಾನಿಯೇ ಪತ್ರ ಬರೆದು, ನೀವು ಗೆದ್ದು ಸಂಸತ್ತಿಗೆ ಆಯ್ಕೆಯಾಗುತ್ತೀರಿ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮೋದಿ ಬರೆದ ಪತ್ರದಲ್ಲೇನಿದೆ?
ನನ್ನ ಸಹೋದ್ಯೋಗಿ ಯದುವೀರ್ ಜೀ ಎಂದು ಪತ್ರ ಆರಂಭಸಿರುವ ಮೋದಿ, ಈ ಪತ್ರ ನಿಮಗೆ ಉತ್ತಮ ಆರೋಗ್ಯವನ್ನು ನೀಡುತ್ತೆ ಎಂದು ಭಾವಿಸುವೆ. ನೀವು ನೇರವಾಗಿ ಜನರ ಸೇವೆ ಮಾಡುವ ಮೂಲಕ ಮೈಸೂರಿನ ಒಡೆಯರ ಪರಂಪರೆಯನ್ನು ಮುನ್ನಡೆಸುತ್ತಿರುವುದು ಶ್ಲಾಘನೆ. ಸುಸ್ಥಿರ ಅಭಿವೃದ್ಧಿ, ಶಿಕ್ಷಣಕ್ಕಾಗಿ ನಿಮ್ಮ ಸಮರ್ಪಣೆ ಸ್ಪಷ್ಟವಾಗಿದೆ. ಜನರ ಆಶೀರ್ವಾದದಿಂದ ನೀವು ಸಂಸತ್ತಿಗೆ ಬರುತ್ತೀರಿ ಎಂಬ ವಿಶ್ವಾಸವಿದೆ. ನಿಮ್ಮಂತಹ ತಂಡದ ಸದಸ್ಯರು ನನಗೆ ದೊಡ್ಡ ಆಸ್ತಿ ಎಂದು ಹೇಳಿದ್ದಾರೆ.
ಒಂದು ತಂಡವಾಗಿ, ನಿಮ್ಮ ಕ್ಷೇತ್ರ ಮತ್ತು ದೇಶದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಜನತೆಗೆ ಇದು ಮಾಮೂಲಿ ಚುನಾವಣೆಯಲ್ಲ ಎಂದು ಹೇಳ ಬಯಸುತ್ತೇನೆ. ಪ್ರತಿಯೊಬ್ಬರಿಗೂ ಉತ್ತಮ ಜೀವನವನ್ನು ಖಚಿತಪಡಿಸಿಕೊಳ್ಳಲು ಈ ಚುನಾವಣೆಯು ನಮ್ಮ ಧ್ಯೇಯದಲ್ಲಿ ನಿರ್ಣಾಯಕವಾಗಿರುತ್ತದೆ. ಬಿಜೆಪಿ ಪಡೆಯುವ ಪ್ರತಿ ಮತವು ಸ್ಥಿರ ಸರ್ಕಾರ ರಚಿಸುವತ್ತ ಸಾಗುತ್ತದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಪಯಣಕ್ಕೆ ವೇಗ ನೀಡುತ್ತದೆ ಎಂದಿದ್ದಾರೆ.
ಬೇಸಿಗೆ ಬಿಸಿ ಎಲ್ಲರಿಗೂ ಸಮಸ್ಯೆ ಉಂಟುಮಾಡುತ್ತದೆ ಎಂದು ನನಗೆ ತಿಳಿದಿದೆ. ಆದರೆ ಈ ಚುನಾವಣೆ ನಮ್ಮ ದೇಶದ ಭವಿಷ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಬಿಸಿಲಿನ ತಾಪಕ್ಕೂ ಮುನ್ನವೇ ಮತದಾರರು ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ನನ್ನ ಪ್ರತಿ ಕ್ಷಣವನ್ನು ನನ್ನ ಸಹ ನಾಗರಿಕರ ಕಲ್ಯಾಣಕ್ಕಾಗಿ ಮೀಸಲಿಡುವೆ. ಈ ಭರವಸೆಯನ್ನು ಪ್ರತಿಯೊಬ್ಬರಿಗೆ ತಿಳಿಸಲು ನಿಮ್ಮನ್ನು ಒತ್ತಾಯಿಸುವೆ. ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ನನ್ನ ಶುಭಾಶಗಳನ್ನ ಕಳಿಸಿದ್ದೇನೆ ಎಂದು ಯದುವೀರ್ಗೆ ಬರೆದ ಪತ್ರದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
ಇದೇ ರೀತಿ ಡಾ.ಸಿ.ಎನ್.ಮಂಜುನಾಥ್ ಮತ್ತು ಬೃಜೇಶ್ ಚೌತಲಗೆ ಪ್ರಧಾನಿಯವರು ಖುದ್ದು ಪತ್ರ ಬರೆದಿದ್ದು, ಮತದಾರರು ನಿಮ್ಮನ್ನು ಎರಡೂ ಕ್ಷೇತ್ರಗಳಲ್ಲಿ ಆಯ್ಕೆ ಮಾಡಲಿದ್ದಾರೆ. ಜನರ ನಿರೀಕ್ಷೆಗಳು ಹುಸಿಯಾಗದಂತೆ ಅವರ ಸೇವೆಗೆ ಸಿದ್ಧರಾಗಿ ಎಂದು ಕರೆ ಕೊಟ್ಟಿದ್ದಾರೆ.