Homeರಾಜ್ಯಬೆಚ್ಚಗೆ ಮಲಗಿದ್ದ ಭ್ರಷ್ಟರ ಬೆವರಿಳಿಸಿದ ಲೋಕಾಯುಕ್ತ ಅಧಿಕಾರಿಗಳು, ಬೆಳ್ಳಂಬೆಳಗ್ಗೆ ರಾಜ್ಯದ 6 ಕಡೆ ದಾಳಿ

ಬೆಚ್ಚಗೆ ಮಲಗಿದ್ದ ಭ್ರಷ್ಟರ ಬೆವರಿಳಿಸಿದ ಲೋಕಾಯುಕ್ತ ಅಧಿಕಾರಿಗಳು, ಬೆಳ್ಳಂಬೆಳಗ್ಗೆ ರಾಜ್ಯದ 6 ಕಡೆ ದಾಳಿ

ಬೆಂಗಳೂರು,ನ.18- ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಭಷ್ಟರಿಗೆ ಚಳಿ ಬಿಡಿಸಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಆರು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ. ಕರ್ನಾಟಕದ ಹಾಸನ, ಚಿತ್ರದುರ್ಗ, ಬಾಗಲಕೋಟೆ, ಬೀದರ್‌ ಹಾಗೂ ಹುಬ್ಬಳ್ಳಿಯಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿವಾಸ, ಕಚೇರಿ ಮತ್ತು ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಲೋಕಾಯುಕ್ತ ಅಧಿಕಾರಿಗಳ ವಿವಿಧ ತಂಡಗಳು ಏಕಕಾಲಕ್ಕೆ ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದಿದ್ದು,ಅಧಿಕಾರಿಗಳಿಗೆ ಸಂಬಂಧಿಸಿದ ಆಸ್ತಿ-ಪಾಸ್ತಿ, ಬ್ಯಾಂಕ್‌ ದಾಖಲೆಗಳು ಹಾಗೂ ಇತರ ಆರ್ಥಿಕ ವ್ಯವಹಾರಗಳ ಮಾಹಿತಿಯನ್ನು ಕಲೆಹಾಕುತ್ತಿವೆ.

ಹಾಸನ: ಅರಣ್ಯಾಧಿಕಾರಿ ಮನೆ ಮೇಲೆ ದಾಳಿ; ಬಾಲಕನ ಶಾಲಾ ಬ್ಯಾಗ್‌ನಲ್ಲಿ ಹಣ ಪತ್ತೆ?
ಸಕಲೇಶಪುರ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಓ) ಹೇಮಂತ್‌ ಕುಮಾರ್‌ ಅವರಿಗೆ ಸೇರಿದ ಹಾಸನ ನಗರದ ಚಿಕ್ಕಹೊನ್ನೇನಹಳ್ಳಿಯ ಮನೆ, ಕುವೆಂಪುನಗರ, ದೊಡ್ಡಮಗ್ಗೆ ಹಾಗೂ ಆಲೂರಿನ ಗುತ್ತಿಗೆದಾರ ಹರೀಶ್‌ ಮನೆ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಲೋಕಾಯುಕ್ತ ತಂಡಗಳು ಶೋಧ ನಡೆಸಿವೆ.ದಾಳಿಯ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ತಮ ಮಗನ ಶಾಲಾ ಬ್ಯಾಗ್‌ ಮತ್ತು ಪ್ಯಾಂಟ್‌ ಜೇಬಿನಲ್ಲಿ ನೋಟಿನ ಕಂತೆಗಳನ್ನು ಇಟ್ಟು ಶಾಲೆಗೆ ಕಳುಹಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಅನುಮಾನಗೊಂಡ ಲೋಕಾಯುಕ್ತ ಸಿಬ್ಬಂದಿ ಮನೆಯ ಬಾಗಿಲಲ್ಲೇ ಬಾಲಕನ ಶಾಲಾ ಬ್ಯಾಗ್‌ ಹಾಗೂ ಪ್ಯಾಂಟ್‌ ಜೇಬನ್ನು ಪರಿಶೀಲಿಸಿದ್ದಾರೆ. ಈ ವೇಳೆ 500 ರೂ. ಮುಖಬೆಲೆಯ ನೋಟುಗಳ ಒಂದು ಕಂತೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಘಟನೆಯಿಂದ ಅಸಮಾಧಾನಗೊಂಡ ಅಧಿಕಾರಿಗಳು, ಪರಿಶೀಲನೆಗೆ ಸಂಪೂರ್ಣ ಸಹಕಾರ ನೀಡುವಂತೆ ಕುಟುಂಬದ ಸದಸ್ಯರಿಗೆ ಸೂಚಿಸಿದ್ದಾರೆ. ಈ ಸಂಬಂಧ ಹೆಚ್ಚಿನ ಪರಿಶೀಲನೆ ಮುಂದುವರಿದಿದೆ.

ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್‌ ಡಾ. ರವೀಂದ್ರ ಹಾಗೂ ತೂಕ ಮತ್ತು ಅಳತೆ ಇಲಾಖೆ ಇನ್‌್ಸಪೆಕ್ಟರ್‌ ವೆಂಕಟೇಶ್‌ ಅವರಿಗೆ ಸೇರಿದ ಮನೆ, ಕಚೇರಿ ಸೇರಿದಂತೆ ಒಟ್ಟು ಹತ್ತು ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಎಂ.ಎಸ್‌‍. ಕೌಲಾಪುರೆ ಹಾಗೂ ಡಿವೈಎಸ್ಪಿ ಕಲಾವತಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ಚಿತ್ರದುರ್ಗದ ಚಳ್ಳಕೆರೆ ರಸ್ತೆಯಲ್ಲಿರುವ ಡಾ. ರವೀಂದ್ರ ಅವರ ಪ್ರಸಾದನಿವಾಸ ಹಾಗೂ ಅವರಿಗೆ ಸೇರಿದ ಅಕ್ಷಯ ಗ್ಲೋಬಲ್‌ ಆಸ್ಪತ್ರೆಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ. ಇದೇ ವೇಳೆ ವಿದ್ಯಾನಗರದಲ್ಲಿರುವ ತೂಕ ಮತ್ತು ಅಳತೆ ಇಲಾಖೆ ಇನ್‌್ಸಪೆಕ್ಟರ್‌ ವೆಂಕಟೇಶ್‌ ಅವರ ನಿವಾಸ ಹಾಗೂ ಅವರಿಗೆ ಸೇರಿದ ಮಹಾಲಕ್ಷ್ಮಿ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಹಲವೆಡೆ ನಿವೇಶನ ,ವಾಣಿಜ್ಯ ಕೇಂದ್ರ,ಕೃಷಿ ಜಮೀನು ಸೇರಿ ಹಲವು ಆಸ್ತಿ ದಾಖಲೆಗಳು,ಚಿನ್ನಾಭರಣ, ಅಪಾರ ನಗದು ಹಣ ಪತ್ತೆಯಾಗಿದೆ.

ಬಾಗಲಕೋಟೆ: ಈ ಹಿಂದೆ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಜಮಖಂಡಿ ತಾಲೂಕು ಪಂಚಾಯತ್‌ನ ಸಹಾಯಕ ನಿರ್ದೇಶಕ ಸಂಜೀವ ಹಿಪ್ಪರಗಿ ಅವರಿಗೆ ಸೇರಿದ ಎರಡು ಮನೆಗಳ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಮಖಂಡಿಯ ವಿಜಯನಗರ (ಜಯನಗರ) ಬಡಾವಣೆಯಲ್ಲಿರುವ ಅವರ ನಿವಾಸ ಹಾಗೂ ಮೈಗೂರು ರಸ್ತೆಯಲ್ಲಿರುವ ಅವರ ತಂದೆಯ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಬಾಗಲಕೋಟೆ ಲೋಕಾಯುಕ್ತ ಎಸ್ಪಿ ಮಹಾಲಿಂಗ ನಂದಗಾವಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುರೇಶ್‌ ರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಬಾಗಲಕೋಟೆ, ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ಜಂಟಿಯಾಗಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬೀದರ್‌:
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲ ರಾಜಕುಮಾರ್‌ ಮಾಲಗೆ ಅವರ ಗುರುನಗರದಲ್ಲಿರುವ ನಿವಾಸ ಹಾಗೂ ಕಚೇರಿ ಸೇರಿದಂತೆ ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.ಲೋಕಾಯುಕ್ತ ಎಸ್ಪಿ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಹನುಮಂತರಾಯ ನೇತೃತ್ವದ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ಅಧಿಕಾರಿಯ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ಹುಬ್ಬಳ್ಳಿ:
ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌‍ ಚಾಲಕ ಕಮ್‌ ನಿರ್ವಾಹಕ ಷಡಕ್ಷರಯ್ಯ ಅವರ ಹುಬ್ಬಳ್ಳಿಯ ಗಾಂಧಿನಗರದಲ್ಲಿರುವ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿ ಆಸ್ತಿ-ಪಾಸ್ತಿ ಹಾಗೂ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆದಿರುವ ಈ ಲೋಕಾಯುಕ್ತ ಕಾರ್ಯಾಚರಣೆಯಲ್ಲಿ ಹಲವು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ನಿವಾಸಗಳು, ಕಚೇರಿಗಳು ಹಾಗೂ ಇತರ ಸ್ಥಳಗಳನ್ನು ಪರಿಶೀಲಿಸಲಾಗುತ್ತಿದೆ. ಆದಾಯದ ಮೂಲ, ಹೊಂದಿರುವ ಆಸ್ತಿ ಮತ್ತು ಲಭ್ಯ ದಾಖಲೆಗಳ ನಡುವಿನ ವ್ಯತ್ಯಾಸದ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಮೈಸೂರು:
ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅ ಕಾರಿಗಳು ಚಾಮರಾಜನಗರ ಲೋಕಾಯುಕ್ತ ಇನ್ಸ್ ಪೆಕ್ಟರ್‌ ಸುಧಾಕರ್‌ ನೇತೃತ್ವದಲ್ಲಿ ಅರಣ್ಯ ಭವನದಲ್ಲಿ ಆರ್‌ಎಫ್‌ಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಂದ್ರ ಅವರ ಕಚೇರಿ ಹಾಗೂ ರಾಂಪುರದ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್‌.ಡಿ. ಕೋಟೆಯಲ್ಲಿರುವ ಅವರ ಸಹೋದರನ ನಿವಾಸದ ಮೇಲೂ ದಾಳಿ ನಡೆದಿದೆ.

ಇಂದು ಬೆಳಗ್ಗೆ 6 ಗಂಟೆಯಿಂದ ಆಸ್ತಿ ಮತ್ತು ಹಣಕಾಸು ವ್ಯವಹಾರಗಳ ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಅ ಕಾರಿಗಳು, ಪರಿಶೀಲನೆ ಮುಂದುವರಿಸಿದ್ದಾರೆ. ದಾಳಿ ನಡೆದ ಎಲ್ಲಾ ಸ್ಥಳಗಳಲ್ಲಿ ಪತ್ತೆಯಾಗಿರುವ ಆಸ್ತಿ ಪತ್ರಗಳು, ಬ್ಯಾಂಕ್‌ ಖಾತೆ ವಿವರಗಳು, ಚಿನ್ನಾಭರಣ ಮತ್ತು ನಗದು ಪರಿಶೀಲನೆ ನಡೆಯುತ್ತಿದ್ದು, ಒಟ್ಟು ಅಕ್ರಮ ಆಸ್ತಿಯ ದಾಖಲೆಗಳ ಸಂಪೂರ್ಣ ವಿವರಗಳು ಪರಿಶೀಲನೆಯ ನಂತರ ಬಹಿರಂಗವಾಗುವ ನಿರೀಕ್ಷೆಯಿದೆ.

RELATED ARTICLES

Latest News