Homeಜಿಲ್ಲಾ ಸುದ್ದಿಗಳುಆನೆ ದಾಳಿಗೆ ರೈತ ಬಲಿ : ಆಕ್ರೋಶಗೊಂಡ ಸ್ಥಳೀಯರಿಂದ ಎನ್‌.ಆರ್‌.ಪುರ ಬಂದ್‌

ಆನೆ ದಾಳಿಗೆ ರೈತ ಬಲಿ : ಆಕ್ರೋಶಗೊಂಡ ಸ್ಥಳೀಯರಿಂದ ಎನ್‌.ಆರ್‌.ಪುರ ಬಂದ್‌

ಚಿಕ್ಕಮಗಳೂರು,ನ.19- ಕಾಡಾನೆ ದಾಳಿಗೆ ರೈತಬಲಿ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ಆದೇಶ ಖಂಡಿಸಿ ಇಂದು ಕರೆ ನೀಡಲಾಗಿದ್ದ ಸ್ವಯಂಪ್ರೇರಿತ ಎನ್‌.ಆರ್‌.ಪುರ ಬಂದ್‌ ಯಶಸ್ವಿಯಾಗಿದೆ.ಕಾಫಿನಾಡಿನಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮುಂದುವರೆದಿದ್ದು, ಆನೆ ದಾಳಿಗೆ ವ್ಯಕ್ತಿ ಬಲಿಯಾದ ದಾರುಣ ಘಟನೆ ನಡೆದಿದೆ.

ನಿನ್ನೆ ಸಂಜೆ ದನ ಹುಡುಕಲು ಹೋದ ವೇಳೆ ಈ ದುರಂತ ಸಂಭವಿಸಿದ್ದು, ಹಾಸನ ಜಿಲ್ಲೆಯ ಬೇಲೂರು ಬಳಿಕ ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಕಾಡಾನೆ ದಾಳಿಗೆ ಜೀವಹಾನಿಯಾಗಿದೆ.ಮೃತ ದುರ್ದೈವಿಯನ್ನು ರೈತ ಕೃಷ್ಣಮೂರ್ತಿ(42) ಎಂದು ಗುರುತಿಸಲಾಗಿದೆ.

ಎನ್‌.ಆರ್‌. ಪುರ ತಾಲೂಕಿನ ಹೆನ್ನಂಗಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಕೃಷ್ಣಮೂರ್ತಿ ತೋಟದಲ್ಲಿದ್ದಾಗ ಏಕಾಏಕಿ ಎದುರಾದ ಕಾಡಾನೆ ಅವರ ಮೇಲೆ ದಾಳಿ ನಡೆಸಿದ್ದರಿಂದ ಅವರು ಮೃತಪಟ್ಟಿದ್ದಾರೆ.ಈ ಪ್ರಕರಣ ಎನ್‌.ಆರ್‌. ಪುರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿರಂತರ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ರೈತರಿಗೆ, ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಅದೆಷ್ಟೋ ಜೀವಗಳು ಬಲಿಯಾಗಿವೆ ಎಂದು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.ಕಾಡಾನೆಗಳ ಸತತ ಹಾವಳಿ ಹಾಗೂ ಪ್ರಾಣಹಾನಿಯಿಂದಾಗಿ ಈ ಭಾಗದ ರೈತರು ತೀವ್ರ ಆತಂಕಕ್ಕೀಡಾಗಿದ್ದು, ಸ್ಥಳದಲ್ಲಿ ಜನಾಕ್ರೋಶ ವ್ಯಕ್ತವಾಗಿದೆ.

ಎನ್‌.ಆರ್‌ ಪುರ ಬಂದ್‌: ಕಾಡಾನೆ ದಾಳಿಯಿಂದ ರೈತನ ಸಾವು ಖಂಡಿಸಿ ಹಾಗೂ ಭದ್ರಾಅಭಯಾರಣ್ಯಕ್ಕೆ ಆನೆಗಳ ಸ್ಥಳಾಂತರ ಆದೇಶ ಕೈಬಿಡುವಂತೆ ಆಗ್ರಹಿಸಿ ಚಿಕ್ಕಮಗಳೂರು ತಾಲ್ಲೂಕಿನ ಎನ್‌.ಆರ್‌ಪುರದಲ್ಲಿಂದು ರೈತರು ಹಾಗೂ ಸಾರ್ವಜನಿಕರು ಸ್ವಯಂ ಘೋಷಿತ ಬಂದ್‌ಗೆ ಕರೆ ನೀಡಲಾಗಿತ್ತು.

ಇಂದು ಬೆಳಗ್ಗೆಯಿಂದಲೇ ಎನ್‌.ಆರ್‌.ಪುರದಲ್ಲಿ ಸಂಪೂರ್ಣ ಸ್ಥಬ್ಧವಾಗಿತ್ತು. ಅಂಗಡಿ ಮಾಲೀಕರು, ರೈತ ಸಂಘಟನೆಗಳು, ವಿವಿಧ ಸಂಘಟನೆಗಳ ಮುಖಂಡರು ಎನ್‌.ಆರ್‌ಪುರ ಬಂದ್‌ಗೆ ಕರೆ ನೀಡಿದ್ದು, ಎಲ್ಲರೂ ಒಟ್ಟಾಗಿ ಬಂದ್‌ಗೆ ಬೆಂಬಲಿಸಿದರು.

ಈಗಾಗಲೇ ಮಳೆ ಕೊರತೆ, ಕೂಲಿ ಕಾರ್ಮಿಕರ ಕೊರತೆ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಕಾಫಿ ನಾಡಿನ ರೈತರು ಕಂಗಾಲಾಗಿದ್ದು, ಜೀವನ ದುಸ್ತರವಾಗಿದೆ. ಈ ನಡುವೆ ಮತ್ತಷ್ಟು ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರ ಮಾಡಿದರೆ ಸಂಪೂರ್ಣವಾಗಿ ಕೃಷಿಯನ್ನೇ ಕೈಬಿಡಬೇಕಾದ ಪರಿಸ್ಥಿತಿ ಬಂದೊದಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಭದ್ರಾಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಕಾಡು ಪ್ರಾಣಿಗಳ ಉಪಟಳದಿಂದ ಪ್ರತಿ ವರ್ಷ ಕಾಫಿ, ಅಡಿಕೆ, ತೆಂಗು, ಮೆಣಸು ಮತ್ತಿತರ ಬೆಳೆಗಳು ನಾಶವಾಗುತ್ತಿತ್ತು. ಜೀವ ಹಾನಿಗಳು ಸಹ ಸಂಭವಿಸುತ್ತಿವೆ. ಪ್ರತಿನಿತ್ಯ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಯಾವುದೇ ಕಾರಣಕ್ಕೂ ಭದ್ರಾಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸಬಾರದೆಂದು ಆಗ್ರಹಿಸಿದರು.

RELATED ARTICLES

Latest News