ಬೆಂಗಳೂರು, ನ.19- ಚಿನಿವಾರಪೇಟೆಯಲ್ಲಿ ಚಿನ್ನ-ಬೆಳ್ಳಿ ದರಗಳು ಸತತವಾಗಿ ಕುಸಿಯುತ್ತಲೇ ಇದ್ದು, ಕಳೆದ ಆರು ತಿಂಗಳಲ್ಲೇ ಕನಿಷ್ಠ ದರಕ್ಕೆ ಇಳಿದಿವೆ. ಕಳೆದ 10 ದಿನಗಳಲ್ಲಿ ಚಿನ್ನ ಒಮೆ ಮಾತ್ರ ಅಲ್ಪ ಚೇತರಿಕೆ ಕಂಡಿದ್ದು, 8 ಬಾರಿ ಇಳಿಕೆಯಾಗಿದೆ. ಚಿನ್ನ-ಬೆಳ್ಳಿ ದರಗಳಲ್ಲಿ ನಿರಂತರ ಕುಸಿತವಾಗುತ್ತಿರುವುದು ವರ್ತಕರಲ್ಲಿ ಆತಂಕವನ್ನುಂಟು ಮಾಡಿದೆ.
ನ.10ರ ನಂತರ ಶುದ್ಧ ಚಿನ್ನ ಒಂದು ಗ್ರಾಂಗೆ 1,418 ರೂ. ಇಳಿಕೆಯಾಗಿದ್ದರೆ, ನ.14ರಂದು ಒಮೆ ಮಾತ್ರ ಕೇವಲ 27 ರೂ. ಏರಿಕೆಯಾಗಿದೆ. ಬೆಳ್ಳಿ ಒಂದು ಕೆ.ಜಿ.ಗೆ 25 ಸಾವಿರ ರೂ. ಕಡಿಮೆಯಾಗಿದೆ. 24 ಕ್ಯಾರೆಟ್ನ ಚಿನ್ನ ಒಂದು ಗ್ರಾಂಗೆ ಈಗ 13 ಸಾವಿರ ರೂ.ನ ಆಸುಪಾಸಿನಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಯುವ ಸಾಧ್ಯತೆಗಳಿವೆ ಎಂಬ ವ್ಯಾಖ್ಯಾನಗಳಿವೆ.
ಕಳೆದ ಜನವರಿಯಲ್ಲಿ ಗರಿಷ್ಠ ದರ ದಾಖಲಾಗಿ, ಆಭರಣ ಪ್ರಿಯರು ಆತಂಕಕ್ಕೆ ಒಳಗಾಗಿದ್ದ ಶುದ್ಧ ಚಿನ್ನ ಒಂದು ಗ್ರಾಂಗೆ 18 ಸಾವಿರ ರೂ.ವರೆಗೂ ಏರಿಕೆಯಾಗಿತ್ತು. ಅನಂತರ ಇಳಿಮುಖವಾದರೂ ಕಳೆದ ಮಾರ್ಚ್ನಿಂದ ಚಿನ್ನ ಒಂದು ಗ್ರಾಂಗೆ 16 ಸಾವಿರ ರೂ. ಆಸುಪಾಸಿನಲ್ಲೇ ಇತ್ತು. ಎರಡು ತಿಂಗಳಿನಿಂದ ಪದೇಪದೇ ಏರಿಳಿತಕ್ಕೆ ಒಳಗಾಗುತ್ತಾ ಬಂದಿದ್ದರೂ, ಒಂದು ತಿಂಗಳಿನಲ್ಲಿ ಇಳಿಮುಖವೇ ಹೆಚ್ಚಾಗಿದೆ.
ಬೆಳ್ಳಿಯು ಒಂದು ಕೆ.ಜಿ.ಗೆ 4 ಲಕ್ಷ ರೂ. ವರೆಗೂ ಏರಿಕೆಯಾಗಿ ಗಾಬರಿ ಪಡುವಂತಾಗಿತ್ತು. 6 ತಿಂಗಳಿಂದ ಎರಡೂವರೆ ಲಕ್ಷ ರೂ. ಆಸುಪಾಸಿನಲ್ಲಿದ್ದ ಬೆಳ್ಳಿ ದರ ಎರಡು ತಿಂಗಳಿಂದ ಇಳಿಮುಖವಾಗುತ್ತಾ ಸಾಗಿದೆ. ಕಳೆದ ಹತ್ತು ದಿನದಲ್ಲಿ 25 ಸಾವಿರ ರೂ. ನಷ್ಟು ಕಡಿಮೆಯಾಗಿದೆ. ಪ್ರಸ್ತುತ 1.85 ಲಕ್ಷ ರೂ. ನಿಂದ 1.80 ಲಕ್ಷ ರೂ.ಗೆ ಇಳಿದಿದೆ.
ಚಿನ್ನ-ಬೆಳ್ಳಿ ದರಗಳಲ್ಲಿ ನಿರಂತರ ಇಳಿಕೆಯಾಗುತ್ತಿರುವುದು ಆಭರಣ ಪ್ರಿಯರು ಖುಷಿಪಡುವಂತಾಗಿದೆ. ದೀಪಾವಳಿಗೂ ಮುನ್ನ ಸ್ವಲ್ಪ ಚೇತರಿಕೆ ಕಂಡು ವರ್ತಕರಿಗೆ ಸಮಾಧಾನ ತಂದಿತ್ತು. ಅಗತ್ಯ ವಸ್ತುಗಳ ಏರಿಕೆಯ ಪರಿಣಾಮ ಗ್ರಾಹಕರ ಚಿನ್ನ ಖರೀದಿ ಕಡಿಮೆಯಾಗಿರುವುದಕ್ಕೆ ಪ್ರಮುಖ ಕಾರಣ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ 24 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ ಇಂದು 257 ರೂ. ಕಡಿಮೆಯಾಗಿದ್ದು, ಪ್ರಸ್ತುತ 13,069ರೂ. ನಷ್ಟಿದೆ. 22 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ 235 ರೂ. ಇಳಿಕೆಯಾಗಿದ್ದು, 11,980 ರೂ. ನಷ್ಟಿದೆ. 18 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ 192 ರೂ. ಕಡಿಮೆಯಾಗಿ 9,802ರೂ.ಗೆ ಇಳಿದಿದೆ. ಚಿನ್ನದಂತೆ ಪ್ಲಾಟಿನಮ್ ಆಭರಣದಲ್ಲೂ ಭಾರಿ ಕುಸಿತವಾಗಿದ್ದು, 10 ಗ್ರಾಂಗೆ 1,020ರೂ. ಕಡಿಮೆಯಾಗಿ 41,060 ರೂ.ನಷ್ಟಿದೆ.
