ಬೆಂಗಳೂರು, ನ.19- ಡಿಮ್ಯಾಂಡ್ ನೋಟೀಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಯುಬಿ ಸಿಟಿ ಕಟ್ಟಡದಲ್ಲಿರುವ 21 ಸ್ವತ್ತುಗಳಿಗೆ ಸಂಬಂಧಿಸಿದ 2.65 ಕೋಟಿ ರೂ.ಗಳ ಆಸ್ತಿ ತೆರಿಗೆ ವಸೂಲಿಯಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುಗಳನ್ನು ಗುರುತಿಸಿ, ಬಾಕಿದಾರರಿಗೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸುವಂತೆ ಹಾಗೂ ಬಾಕಿ ತೆರಿಗೆಯನ್ನು ಆದ್ಯತೆಯ ಮೇರೆಗೆ ವಸೂಲಿ ಮಾಡುವಂತೆ ಆಯುಕ್ತ ಜಗದೀಶ್ ಅವರು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ನಿನ್ನೆ ಸಭೆ ನಡೆಸಿ ಕಟ್ಟುನಿಟ್ಟಿನ ಆದೇಶ ನೀಡಿದ್ದರು.
ಹೀಗಾಗಿ ಅಧಿಕಾರಿಗಳು ತೆರಿಗೆ ಬಾಕಿದಾರರಿಗೆ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸುವುದರ ಜೊತೆಗೆ ತೆರಿಗೆ ವಸೂಲಾತಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು. ಇದರ ಭಾಗವಾಗಿ, ಶಾಂತಿನಗರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳ ವ್ಯಾಪ್ತಿಗೆ ಒಳಪಡುವ ವಿಠಲ್ ಮಲ್ಯ ರಸ್ತೆಯಲ್ಲಿರುವ ಯು.ಬಿ ಸಿಟಿಯ 21 ಸ್ವತ್ತುಗಳಿಗೆ ಸಂಬಂಧಿಸಿದಂತೆ 2,65,52,991 ರೂ.ಗಳ ಡಿಡಿಯನ್ನು ಆಯುಕ್ತ ಜಗದೀಶ್ ಅವರಿಗೆ ನೀಡಲಾಗಿದೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲಾ ಆಸ್ತಿ ಮಾಲೀಕರು ಕೂಡಲೇ ತಮ್ಮ ಬಾಕಿ ತೆರಿಗೆ ಮೊತ್ತವನ್ನು ಪಾವತಿಸುವಂತೆ ಆಯುಕ್ತರು ಸಾರ್ವಜನಿಕರಿಗೆ ವಿನಂತಿಸಿದ್ದು, ಬಾಕಿ ತೆರಿಗೆ ಉಳಿಸಿಕೊಂಡಿರುವ ಸ್ವತ್ತುಗಳನ್ನು ಗುರುತಿಸಿ, ಸಂಬಂಧಪಟ್ಟ ಮಾಲೀಕರಿಗೆ ನಿಯಮಾನುಸಾರ ನೋಟಿಸ್ ಜಾರಿಗೊಳಿಸುವ ಮೂಲಕ ತೆರಿಗೆ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸದಿದ್ದಲ್ಲಿ ಅಂತಹ ಸ್ವತ್ತುಗಳ ವಿರುದ್ಧ ನಿಯಮಾನುಸಾರ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್.ಜಿ ರವರು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಕಂದಾಯ ಅಪರ ಆಯುಕ್ತರಾದ ಲಕ್ಮಮ್ಮ, ಜಂಟಿ ಆಯುಕ್ತ ಹೇಮಂತ್ ಶರಣ್, ಸಹಾಯಕ ಕಂದಾಯ ಅಧಿಕಾರಿರೂಪ, ಕಂದಾಯ ಪರಿವೀಕ್ಷಕರು ಸೇರಿದಂತೆ ಇನ್ನಿತರೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
