ಬೆಂಗಳೂರು,ಡಿ.23- ನಗರದಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜನರು ರಸ್ತೆಗಳಲ್ಲಿ ಓಡಾಡುತ್ತಿರುವ ಹಗಲು ವೇಳೆಯಲ್ಲೇ ಮನೆಗಳ ಆವರಣದಲ್ಲಿ ಇಟ್ಟಿದ್ದಂತಹ ತುಂಬಿದ್ದ ಗ್ಯಾಸ್ ಸಿಲಿಂಡರ್ಗಳನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.
ರಾಜಾಜಿನಗರದ ಮಂಜುನಾಥ ನಗರ 2ನೇ ಹಂತದಲ್ಲಿ ಮೊನ್ನೆ ಮಧ್ಯಾಹ್ನ ಸಮಯದಲ್ಲಿ ಗ್ಯಾಸ್ ಡೆಲಿವರಿ ನೀಡಿದ ದಿನವೇ, ಕೆಲವೇ ಗಂಟೆಗಳೊಳಗೆ ಆ ಸಿಲಿಂಡರ್ಗಳನ್ನು ಕಳ್ಳರು ಟಾರ್ಗೆಟ್ ಮಾಡಿ ಕದ್ದಿದ್ದಾರೆ ಎನ್ನಲಾಗಿದೆ.
ಮನೆಯ ಬೇಸ್ಮೆಂಟ್ನಲ್ಲಿ ಇಟ್ಟಿದ್ದ ಎರಡು ಗ್ಯಾಸ್ ಸಿಲಿಂಡರ್ಗಳನ್ನು ಇಬ್ಬರು ಕಳ್ಳರು ಹೊತ್ತೊಯ್ದಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸ್ಕೂಟಿಯಲ್ಲಿ ಬಂದ ಒಬ್ಬ ಕಳ್ಳ ಕಾವಲು ನಿಂತರೆ, ಮತ್ತೊಬ್ಬನು ಮನೆಗೆ ನುಗ್ಗಿ ಸಿಲಿಂಡರ್ ಕದ್ದಿರುವುದು ಕಂಡುಬಂದಿದೆ.
ಜನರು ಓಡಾಡುತ್ತಿರುವಾಗಲೇ ಪರಿಚಯಸ್ಥರಂತೆ ವರ್ತಿಸಿ ಮನೆಗೆ ಪ್ರವೇಶಿಸಿರುವುದು ಸಿಸಿಟಿವಿಯಲ್ಲಿ ಸ್ಪಷ್ಟವಾಗಿದೆ.ಮಾಹಿತಿಯ ಪ್ರಕಾರ, ಕಳ್ಳರು ಗ್ಯಾಸ್ ಡೆಲಿವರಿ ವಾಹನವನ್ನು ಹಿಂಬಾಲಿಸಿ, ಡೆಲಿವರಿ ನಡೆದ ಮನೆಗಳನ್ನು ಗುರುತಿಸಿ ನಂತರ ಕಳ್ಳತನಕ್ಕೆ ಪ್ಲಾನ್ ಮಾಡುತ್ತಿದ್ದಾರೆ. ಗ್ಯಾಸ್ ಡೆಲಿವರಿ ಕೊಟ್ಟ ದಿನವೇ ತುಂಬಿದ್ದ ಸಿಲಿಂಡರ್ಗಳನ್ನು ಕ್ದೊಯ್ಯುವುದು ಇವರ ಚಾಲಾಕಿತನ.
ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಕಳ್ಳರ ಪತ್ತೆಗೆ ಪೊಲೀಸರು ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ. ನಾಗರಿಕರು ಎಚ್ಚರಿಕೆ ವಹಿಸುವಂತೆ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
