Tuesday, December 23, 2025
Homeರಾಜ್ಯಬೆಂಗಳೂರು - ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ರೈಲು ಆರಂಭಕ್ಕೆ ಹೆಚ್ಡಿಕೆ ಮನವಿ

ಬೆಂಗಳೂರು – ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ರೈಲು ಆರಂಭಕ್ಕೆ ಹೆಚ್ಡಿಕೆ ಮನವಿ

HDK appeals for the start of Vande Bharat train connecting Bengaluru to coastal districts

ನವದೆಹಲಿ, ಡಿ.23- ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ರಾಜ್ಯದ ಕರಾವಳಿ ಭಾಗದ ಜನರಿಗೆ ಅನುಕೂಲವಾಗುವಂತೆ ಬೆಂಗಳೂರು-ಗೋವಾದ ಮಡಗಾಂವ್‌ ಮಾರ್ಗದಲ್ಲಿ ವಂದೇ ಭಾರತ್‌ ಎಕ್ಸ್ ಪ್ರೆಸ್‌‍ ರೈಲು ಸೇವೆ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರಿನಿಂದ ಹಾಸನ- ಮಂಗಳೂರು ಜಂಕ್ಷನ್‌- ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್‌ವರೆಗೆ ಅತಿವೇಗದ ವಂದೇ ಭಾರತ್‌ ರೈಲು ಸೇವೆ ಆರಂಭಿಸುವಂತೆ ಕೋರಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶ ಸೇರಿದಂತೆ ಈ ಮಾರ್ಗದಲ್ಲಿ ಸಂಪೂರ್ಣ ವಿದ್ಯುದೀಕರಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವೇಗದ ರೈಲು ಸೇವೆ ಆರಂಭಿಸಲು ಇದೀಗ ಎಲ್ಲಾ ರೀತಿಯ ಅನುಕೂಲಕರ ಮೂಲಸೌಲಭ್ಯಗಳಿವೆ ಎಂದು ಅವರು ಹೇಳಿದ್ದಾರೆ.

ಹಾಸನ, ಮಂಗಳೂರು ಜಂಕ್ಷನ್‌, ಉಡುಪಿ, ಕಾರವಾರ ಮಾರ್ಗವಾಗಿ ಮಡಗಾಂವ್‌ಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ರೈಲು ಸೇವೆಯಿಂದ ಪ್ರವಾಸ, ಯಾತ್ರಾರ್ಥಿಗಳು, ಶಿಕ್ಷಣ ಹಾಗೂ ವೃತ್ತಿಪರ ಕಾರಣಗಳಿಗಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೇಶದ ಐಟಿ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳು, ಬಂದರುಗಳು ಮತ್ತು ಪ್ರವಾಸಿ ತಾಣಗಳಿಗೆ ಹಾಗೂ ಗೋವಾ ನಡುವೆ ನೇರ ಹಾಗೂ ವೇಗದ ರೈಲು ಸಂಪರ್ಕ ಕಲ್ಪಿಸುವುದರಿಂದ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಚುರುಕಾಗಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ರೈಲು ಸೇವೆ ಆರಂಭಿಸುವುದರಿಂದ ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆ ಈಡೇರಿಸಿದಂತಾಗುತ್ತದೆ. ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತವೆ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಉದ್ಯೋಗಾವಕಾಶಗಳ ವೃದ್ಧಿಗೂ ಸಹಕಾರಿಯಾಗಲಿದೆ. ಸಮಗ್ರ, ದಕ್ಷ ಮತ್ತು ಅತ್ಯಾಧುನಿಕ ಧ್ಯೇಯ ಕಾರ್ಯಜಾಲದ ಸರ್ಕಾರದ ಮುನ್ನೋಟಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ರೈಲು ಸಂಪರ್ಕವನ್ನು ಬೆಸೆಯುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮನವಿಯನ್ನು ಪರಿಗಣಿಸಿ ವಂದೇ ಭಾರತ್‌ ರೈಲು ಸೇವೆ ಆರಂಭಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನೈರುತ್ಯ ರೈಲ್ವೆಯ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರೈಲ್ವೆ ಸಚಿವರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Read this : ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ : 3 ವರ್ಷದಲ್ಲಿ 855 ಕೋಟಿ ರೂ ಟೋಲ್‌. ಸಂಗ್ರಹ

RELATED ARTICLES

Latest News