ಬೆಂಗಳೂರು, ಡಿ.23- ನಾಳೆ ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯ್ ಹಜಾರೆ ಕ್ರಿಕೆಟ್ ಪಂದ್ಯಗಳು ನಡೆಯುವುದಿಲ್ಲ.ಐಪಿಎಲ್ ಪಂದ್ಯ ಗೆದ್ದ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಅಮಾಯಕ ಜೀವಗಳು ಬಲಿಯಾದ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳಿಗೂ ಅನುಮತಿ ನೀಡಲಾಗಿರಲಿಲ್ಲ.
ಆದರೆ, ನಾಳೆಯಿಂದ ಆರಂಭವಾಗಲಿರುವ ವಿಜಯ್ ಹಜಾರೆ ಪಂದ್ಯಕ್ಕೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮನವಿ ಮಾಡಿಕೊಂಡಿದ್ದರು.ಹೀಗಾಗಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನೇತೃತ್ವದ ಸಮಿತಿ ಇಂದು ನಡೆಸಿದ ಮಹತ್ವದ ಸಭೆಯಲ್ಲಿ ಸದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಲು ಅವಕಾಶ ನೀಡಬಾರದು ಎಂಬ ತೀರ್ಮಾನ ಕೈಗೊಳ್ಳಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಪೊಲೀಸ್, ಅಗ್ನಿಶಾಮಕ ದಳ, ಪಿಡಬ್ಲ್ಯೂಡಿ, ಬೆಸ್ಕಾಂ ಅಧಿಕಾರಿಗಳು ಸ್ಟೇಡಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಗೃಹ ಇಲಾಖೆ ಮತ್ತಿತರ ಅಧಿಕಾರಿಗಳ ಮನವೊಲಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಮೂಲಭೂತ ಹಾಗೂ ಭದ್ರತಾ ಸುರಕ್ಷತಾ ದೃಷ್ಟಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ ನಾಳೆಯಿಂದ ಆರಂಭವಾಗಬೇಕಿದ್ದ ವಿಜಯ್ ಹಜಾರೆ ಕ್ರಿಕೆಟ್ ಪಂದ್ಯಗಳು ಚಿನ್ನಸ್ವಾಮಿ ಬದಲಿಗೆ ದೇವನಹಳ್ಳಿಯ ಮೈದಾನದಲ್ಲಿ ನಡೆಯಲಿವೆ.
