Friday, November 22, 2024
Homeರಾಜ್ಯಕರ್ನಾಟಕ ಸೇರಿ 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ನಾಳೆ ನಿರ್ಧಾರವಾಗಲಿದೆ ಘಟಾನುಘಟಿ ನಾಯಕರ ಭವಿಷ್ಯ

ಕರ್ನಾಟಕ ಸೇರಿ 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ನಾಳೆ ನಿರ್ಧಾರವಾಗಲಿದೆ ಘಟಾನುಘಟಿ ನಾಯಕರ ಭವಿಷ್ಯ

ಬೆಂಗಳೂರು,ಏ.25- ಕಾಂಗ್ರೆಸ್‍ನ ವರಿಷ್ಠ ನಾಯಕ ರಾಹುಲ್‍ಗಾಂಧಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬೂಪೇಶ್ ಬಗೇಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಟಿ ಹೇಮಾಮಾಲಿನಿ, ಬಿಜೆಪಿ ರಾಷ್ಟ್ರೀಯ ಯುವ ಘಟಕ ಅಧ್ಯಕ್ಷ ತೇಜಸ್ವಿ ಸೂರ್ಯ ಸೇರಿದಂತೆ ಪ್ರಮುಖ ನಾಯಕರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಎರಡನೇ ಹಂತದ ಲೋಕಸಭಾ ಚುನಾವಣೆ ನಾಳೆ ನಡೆಯಲಿದೆ.

ನಾಳೆ 13 ರಾಜ್ಯಗಳ 89 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅದರಲ್ಲಿ ಕೇರಳದ 20 ಕ್ಕೆ 20 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ಪೂರ್ಣಗೊಳ್ಳಲಿದೆ. ಉಳಿದಂತೆ ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶ, ಮಹಾರಾಷ್ಟ್ರ ತಲಾ 8, ಮಧ್ಯಪ್ರದೇಶದ 7, ಅಸ್ಸಾಂ, ಬಿಹಾರದ ತಲಾ 5, ಛತ್ತೀಸ್‍ಗಡ, ಪಶ್ಚಿಮಬಂಗಾಳದ ತಲಾ 3, ತ್ರಿಪುರ, ಜಮ್ಮು-ಕಾಶ್ಮೀರ ತಲಾ 1, ಮಣಿಪುರದಲ್ಲಿ ಒಂದು ಅರ್ಧ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

ಏಪ್ರಿಲ್ 4ಕ್ಕೆ ನಾಮಪತ್ರ ಸಲ್ಲಿಸುವ ಕೊನೆಯ ದಿನದ ವೇಳೆಗೆ 89 ಕ್ಷೇತ್ರಗಳಿಗೆ 1,206 ಅಭ್ಯರ್ಥಿಗಳಿಂದ 2,633 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರ ಪರಿಶೀಲನೆ ಬಳಿಕ 1,428 ನಾಮಪತ್ರಗಳು ಊರ್ಜಿತಗೊಂಡಿವೆ.

ಕೇರಳದ ವೈನಾಡು ಕ್ಷೇತ್ರದಲ್ಲಿ ರಾಹುಲ್‍ಗಾಂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಬಿಜೆಪಿಯ ಕೆ.ಸಿಂಗರಂ ಮತ್ತು ಸಿಪಿಐನ ಅಣೈರಾಜ ಅವರ ನಡುವೆ ತ್ರಿಕೋನ ಸ್ಪರ್ಧೆಯಿದೆ. ತಿರುವನಂತಪುರಂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕ ಶಶಿತರೂರ್ ಎದುರು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸ್ಪರ್ಧೆ ಮಾಡಿದ್ದಾರೆ.

ಬಿಜೆಪಿಯ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೋಟಾ ಕ್ಷೇತ್ರದಿಂದ, ಹೇಮಾಮಾಲಿನಿ ಮಥುರಾ ಕ್ಷೇತ್ರದಿಂದ, ಅರುಣ್ ಗೋವಿಂದ್ ಮೀರಥ್‍ನಿಂದ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ ಕ್ಷೇತ್ರದಿಂದ, ಅಮರಾವತಿಯಲ್ಲಿ ನವನೀತ್ ರಾಣ, ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ, ಕಾಂಗ್ರೆಸ್‍ನ ಮಾಜಿ ಮುಖ್ಯಮಂತ್ರಿ ಬೂಪೇಶ್ ಬಗೇಲ್, ರಾಜಾನಂದಗೌನ, ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್‍ನಿಂದ ಕಣದಲ್ಲಿದ್ದಾರೆ. ಉಳಿದಂತೆ ಪ್ರಮುಖರಾದ ಕೆ.ಸಿ.ವೇಣುಗೋಪಾಲ್, ಕೆ.ಮುರಳೀಧರನ್, ಸುರೇಶ್ ಗೋಪಿ, ಗೋವಿಂದ್ ಕಾರಜೋಳ, ಡಿ.ಕೆ.ಸುರೇಶ್, ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವರು ಕಣದಲ್ಲಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ 88 ಕ್ಷೇತ್ರಗಳಲ್ಲಿ ಬಿಜೆಪಿ 52, ಶಿವಸೇನೆ 4, ಜೆಡಿಯು 4, ಪಕ್ಷೇತರ 1 ಸೇರಿದಂತೆ ಎನ್‍ಡಿಎ ಕೂಟ 61 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟದಲ್ಲಿ ಜೆಡಿಎಸ್ 1, ಕೇರಳ ಕಾಂಗ್ರೆಸ್ ಮಣಿ 1, ಪಕ್ಷೇತರರು 1, ಐಯುಎಂಎಲ್ 2, ಕಾಂಗ್ರೆಸ್ 18 ಕ್ಷೇತ್ರಗಳಲ್ಲಿ ಸೇರಿ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಇತರ ಪಕ್ಷಗಳಾದ ಬಿಎಸ್ಪಿ, ಸಿಪಿಎಂ, ಎನ್‍ಪಿಎಫ್ ತಲಾ 1 ರಲ್ಲಿ ಗೆಲುವು ಕಂಡಿತ್ತು.

ಎರಡನೇ ಹಂತದ ಚುನಾವಣೆಗಾಗಿ ಆಯೋಗ ದೇಶಾದ್ಯಂತ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಇಂದು ಹಲವು ಕಡೆ ಮಸ್ಟರಿಂಗ್ ಕೇಂದ್ರಗಳ ಮೂಲಕ ಚುನಾವಣಾ ಸಿಬ್ಬಂದಿಗಳು ಮತಯಂತ್ರ ಹಾಗೂ ಅಗತ್ಯ ಪರಿಕರಳೊಂದಿಗೆ ಮತಗಟ್ಟೆಗೆ ತೆರಳಿದ್ದಾರೆ.ಬಿಸಿಲಿನ ತಾಪಮಾನ ವ್ಯಾಪಕವಾದ ಹಿನ್ನೆಲೆಯಲ್ಲಿ ರಾಜಸ್ಥಾನ ಸೇರಿದಂತೆ ಕೆಲವು ಕಡೆ ಮಸ್ಟರಿಂಗ್ ಸೆಂಟರ್‍ಗಳಲ್ಲಿ ಪೆಂಡಾಲ್‍ಗಳನ್ನು ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು. ಛತ್ತೀಸ್‍ಗಡದಲ್ಲಿ ಸೂಕ್ಷ್ಮ ಮತಗಟ್ಟೆಗೆ ತೆರಳುವ ಸಿಬ್ಬಂದಿಗಳಿಗೆ ಹೆಲಿಕಾಫ್ಟರ್, ಪ್ರತ್ಯೇಕ ವಾಹನ ಹಾಗೂ ಭದ್ರತಾ ವ್ಯವಸ್ಥೆ ಮಾಡಿದ್ದು ಗಮನ ಸೆಳೆದಿತ್ತು.

RELATED ARTICLES

Latest News