ಬೆಂಗಳೂರು,ಏ.25- ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಕೊರತೆ ಒಂದಡೆಯಾದರೆ ಮತ್ತೊಂದೆಡೆ ಬಿಸಿಲಿನ ಬೇಗೆ ತೀವ್ರಗೊಂಡಿದ್ದು, ಜನರು ತತ್ತರಿಸುವಂತಾಗಿದೆ. ಕಳೆದೆರಡು ತಿಂಗಳಿನಿಂದ ನಿರಂತರವಾಗಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಜನರು ಬಸವಳಿದಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಗರಿಷ್ಠ ತಾಪಮಾನ 40 ಡಿ.ಸೆ. ದಾಟಿದೆ. ರಾಯಚೂರಿನಲ್ಲಿ ಅತ್ಯಧಿಕ 41 ಡಿ.ಸೆ. ದಾಖಲಾಗಿದೆ. ಸದ್ಯಕ್ಕೆ ಮಳೆ ಬರುವ ಸಾಧ್ಯತೆಗಳು ತೀರಾ ವಿರಳವಾಗಿದ್ದು, ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಕಳೆದ ಎಂಟತ್ತು ದಿನಗಳಿಂದ ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ಚದುರಿದಂತೆ ಕೆಲವೆಡೆ ಹಗುರವಾದ ಮಳೆಯಾಗಿದೆ. ಆದರೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗದ ಕಾರಣ ವಾತಾವರಣದಲ್ಲಿನ ತೇವಾಂಶವು ಕಡಿಮೆಯಾಗಿದೆ. ಹೀಗಾಗಿ ಹಗಲಿನ ವೇಳೆ ಬಿಸಿಲಿನ ಜೊತೆಗೆ ಬಿಸಿ ಗಾಳಿಯೂ ಜನರನ್ನು ಹೈರಾಣುಗೊಳಿಸಿದೆ.
ರಾಜಧಾನಿ ಬೆಂಗಳೂರಿನಲ್ಲೂ ಗರಿಷ್ಠ ತಾಪಮಾನ 37 ಡಿ.ಸೆ. ನಷ್ಟು ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 35 ಡಿ.ಸೆ. ಗಡಿ ದಾಟಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರಾಸರಿ 40 ಡಿ.ಸೆ ಗಿಂತಲೂ ಹೆಚ್ಚು ತಾಪಮಾನ ದಾಖಲಾಗುತ್ತಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮಂಡ್ಯ 39, ಚಿಂತಾಮಣಿ 38.1, ದಾವಣಗೆರೆ 38.5, ಚಿತ್ರದುರ್ಗ 38, ಚಾಮರಾಜನಗರ 38, ಬೆಂಗಳೂರು 37, ಕೊಪ್ಪಳ 39.7, ಕಲಬುರಗಿ 40.6, ಗದಗ 38.2, ಬಾಗಲಕೋಟೆ 40, ವಿಜಯಪುರ 39, ಕಾರವಾರ 37.1, ಶಿರಾಳಿ 37.5 ಡಿ.ಸೆಂ. ನಷ್ಟು ದಾಖಲಾಗಿದೆ.ಹೀಗಾಗಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸುಡುಬಿಸಿಲಿನ ಬಿಸಿ ತಟ್ಟತೊಡಗಿದೆ.