ಬೆಂಗಳೂರು, ಏ.25- ಮುಸುಕುದಾರಿ ಮೂವರು ದರೋಡೆಕೋರರು ವೈದ್ಯನ ಮನೆಗೆ ನುಗ್ಗಿ ನಗದು ಸೇರಿದಂತೆ 40 ಲಕ್ಷ ರೂ. ವೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುವ ವೇಳೆ ಎದುರಿಗೆ ಬಂದ ವೈದ್ಯರಿಗೆ ಪಿಸ್ತೂಲು ತೋರಿಸಿ ಬೆದರಿಸಿ ಓಡಿ ಹೋದ ಘಟನೆ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಈ ದರೋಡೆಕೋರರು ಉತ್ತರ ಪ್ರದೇಶದ ಗ್ಯಾಂಗ್ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸಹಕಾರ ನಗರದ ನಿವಾಸಿ ವೈದ್ಯ ಡಾ. ಉಮಾಶಂಕರ್ ಎಂಬುವರ ಮನೆಗೆ ರಾತ್ರಿ 8.20 ರ ಸುಮಾರಿನಲ್ಲಿ ಮೂವರು ಮುಸುಕುದಾರಿ ದರೋಡೆಕೋರರು ನುಗ್ಗಿ ಮೊದಲ ಮಹಡಿಯ ವಾರ್ಡ್ರೋಬ್ಗಳನ್ನು ಒಡೆದು ಅದರಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ. ಆ ವೇಳೆ ಕೈಗೆ ಸಿಕ್ಕಿದ ಲಕ್ಷಾಂತರ ಹಣ, 500 ಗ್ರಾಂ ಚಿನ್ನಾಭರಣ, ವಿವಿಧ ಕಂಪನಿಯ 6 ಸ್ವಿಸ್ ಕಂಪನಿಯ ವಾಚ್ಗಳನ್ನು ಬ್ಯಾಗ್ನಲ್ಲಿ ತುಂಬಿ ಕೊಂಡಿದ್ದಾರೆ.
ಆ ಸಂದರ್ಭದಲ್ಲಿ ಹೊರಗೆ ಹೋಗಿದ್ದ ಉಮಾಶಂಕರ್ ಅವರು ಮನೆ ಬಳಿ ಬಂದಾಗ ಬಾಗಿಲು ತೆರೆದಿತ್ತು. ಮನೆ ಮಧ್ಯದಲ್ಲಿ ಒಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ನಿಂತಿರುವುದನ್ನು ಗಮನಿಸಿ ಬಾಗಿಲು ಬಳಿ ಹೋಗಿ ಯಾರಪ್ಪ ನೀನು ಎಂದು ವಿಚಾರಿಸಿದ್ದಾರೆ.
ಆ ವೇಳೆ ಆತ ಜೋರಾಗಿ ಭಯ್ಯಾ, ಭಯ್ಯಾ ಎಂದು ಕೂಗಿಕೊಂಡಾಗ ಮನೆಯೊಳಗೆ ಕಳ್ಳರು ನುಗ್ಗಿದ್ದಾರೆಂದು ಅನುಮಾನಗೊಂಡು ತಕ್ಷಣ ಹೊರಗಿನಿಂದ ಬಾಗಿಲು ಚಿಲಕ ಹಾಕಲು ಪ್ರಯತ್ನಿಸಿದ್ದಾರೆ. ಮನೆಯೊಳಗಿದ್ದ ಮತ್ತೊಬ್ಬ ದರೋಡೆಕೋರ ತಕ್ಷಣ ಬಂದು ವೈದ್ಯರಿಗೆ ಪಿಸ್ತೂಲ್ ತೋರಿಸಿ ಬಾಗಿಲು ತೆರೆಯಿರಿ, ಇಲ್ಲದಿದ್ದರೆ ನಿಮ್ಮನ್ನು ಸಾಯಿಸುವುದಾಗಿ ಬೆದರಿಸಿದಾಗ, ಬಾಗಿಲು ಚಿಲಕ ಹಾಕದೇ ಸುಮ್ಮನಾಗಿದ್ದಾರೆ.
ಆ ಸಂದರ್ಭದಲ್ಲಿ ಇಬ್ಬರು ದರೋಡೆಕೋರರು ಸೇರಿ ಕೊಂಡು ವೈದ್ಯರನ್ನು ಒಳಗೆ ಎಳೆದು ಕೊಂಡಿದ್ದಾರೆ. ಆ ವೇಳೆ ಮತ್ತೊಬ್ಬ ದರೋಡೆಕೋರ ಮನೆಯ ಮೊದಲ ಮಹಡಿಯಿಂದ ದರೋಡೆ ಮಾಡಿದ್ದ ಹಣ- ಆಭರಣವಿದ್ದ ಬ್ಯಾಗನ್ನು ಹಿಡಿದು ಕೆಳಗೆ ಇಳಿದಿದ್ದಾನೆ.
ನಂತರ ಮನೆಯೊಳಗಿದ್ದ ಇಬ್ಬರು ದರೋಡೆಕೋರರು ವೈದ್ಯರನ್ನು ಒಂದು ರೂಮ್ನಲ್ಲಿ ಕೂಡಿ ಹಾಕಿ ಮತ್ತೊಬ್ಬನೊಂದಿಗೆ ಪರಾರಿಯಾಗಿದ್ದಾರೆ.
ಒಳಗಿನಿಂದ ಲಾಕ್ ತೆಗೆದು ವೈದ್ಯ ಹೊರಗೆ ಬರುವಷ್ಟರಲ್ಲಿ ದರೋಡೆ ಕೋರರು ಕಣ್ಮರೆಯಾಗಿದ್ದಾರೆ.ಬಳಿಕ ಮನೆ ಮಾಲೀಕರು ಮೊದಲ ಮಹಡಿಗೆ ಹೋಗಿ ನೋಡಿದಾಗ ಹಣ, ಆಭರಣ ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ.
ತಕ್ಷಣ ಅವರು ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.ದರೋಡೆಕೋರರ ಭಾಷೆ, ವರ್ತನೆ ಗಮನಿಸಿದರೆ ಉತ್ತರ ಪ್ರದೇಶ ಮೂಲದ ಗ್ಯಾಂಗ್ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಮನೆಯ ಸುತ್ತಮುತ್ತಲ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಅದರಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಆಧರಿಸಿ ದರೋಡೆಕೋರರಿಗಾಗಿ ಶೋಧ ಕೈಗೊಂಡಿದ್ದಾರೆ.