ನವದೆಹಲಿ,ಡಿ.23- ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ನೀರಾವರಿ ಯೋಜನೆಗಳು ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೇಂದ್ರ ಸಚಿವರ ಜೊತೆ ಸರಣಿ ಸಭೆಗಳನ್ನು ನಡೆಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ದೆಹಲಿಗೆ ಆಗಮಿಸಿದ ಅವರು, ಕರ್ನಾಟಕ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ನದಿಗಳ ಜೋಡಣೆಗೆ ಸಂಬಂಧಪಟ್ಟಂತೆ ಇಂದು ಮಧ್ಯಾಹ್ನ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಇದೇ ವೇಳೆ ತಾವು ಕರ್ನಾಟಕದ ಹಲವಾರು ನೀರಾವರಿ ಯೋಜನೆಗಳ ಬೇಡಿಕೆಗಳ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ ಎಂದರು.
ಚರ್ಚೆಯ ವೇಳೆ ತುಂಗ-ಭದ್ರಾ ನದಿ ನೀರನ್ನು ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲು ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡಬೇಕಿದೆ. ನೀರಿನ ಸಂಗ್ರಹಣೆಗೆ ಪರ್ಯಾಯ ಸೌಲಭ್ಯದ ಅನಿವಾರ್ಯತೆ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು. ಇದೇ ವೇಳೆ ಕೃಷ್ಣ ನ್ಯಾಯಾಧಿಕರಣದ ತೀರ್ಪಿನ ಅಧಿಸೂಚನೆ ಬಾಕಿ ಇರುವ ಬಗ್ಗೆ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ ಘೋಷಿತ ಅನುದಾನ ಬಿಡುಗಡೆ ಮಾಡುವುದು, ಕಾವೇರಿ ನದಿಗೆ ಮೇಕೆದಾಟು, ಮಹದಾಯಿ ನದಿಗೆ ಅಡ್ಡಲಾಗಿ ಕಳಸ-ಬಂಡೂರಿ ಅಣೆಕಟ್ಟು ನಿರ್ಮಿಸುವುದು ಸೇರಿದಂತೆ ರಾಜ್ಯಕ್ಕೆ ಹಿತಾಸಕ್ತಿಗೆ ಅನುವಾಗುವ ಎಲ್ಲಾ ವಿಷಯಗಳ ಬಗ್ಗೆ ಕೇಂದ್ರ ಸಚಿವರ ಜೊತೆ ಚರ್ಚಿಸುವುದಾಗಿ ಹೇಳಿದರು.
ಅದಕ್ಕೂ ಮೊದಲು ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಜೊತೆ ಚರ್ಚೆ ಮಾಡುತ್ತೇನೆ. ಮೆಟ್ರೋ ಯೋಜನೆಗೆ ಕೇಂದ್ರದ ಅರ್ಧದಷ್ಟು ವೆಚ್ಚ ಭರಿಸಬೇಕು ಎಂದು ಬೇಡಿಕೆ ಮಂಡಿಸಲಾಗುವುದು. ಶೇ.50ರಷ್ಟು ವೆಚ್ಚ ಭರಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಈಗ ಶೇ.12 ರಷ್ಟು ಮಾತ್ರ ಹಣ ನೀಡುತ್ತಿದೆ. ಇದು ಸಾಲುವುದಿಲ್ಲ ಎಂಬುದು ರಾಜ್ಯದ ಅಭಿಪ್ರಾಯವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವೆಚ್ಚದ ಅರ್ಧದಷ್ಟು ಭರಿಸಬೇಕು ಎಂದು ಆಗ್ರಹಿಸುತ್ತೇನೆ ಎಂದರು.
2027ರ ವೇಳೆ 175 ಕಿಲೋ ಮೀಟರ್ ಉದ್ದದ ಮೆಟ್ರೋ ಮಾರ್ಗದ ಕಾಮಗಾರಿಗಳು ಮುಗಿಯಬೇಕಿದೆ. ಕೇಂದ್ರ ಸರ್ಕಾರ ಕೆಲವು ಪ್ರಸ್ತಾವನೆಗಳನ್ನು ಬಾಕಿ ಉಳಿಸಿಕೊಂಡಿದೆ. ಆ ವಿಚಾರವನ್ನು ಕೇಂದ್ರ ಸಚಿವರ ಗಮನಕ್ಕೆ ತರುವ ಮೂಲಕ ಶೀಘ್ರ ಅನುಮತಿ ಪಡೆದುಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದರು.ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳಿಗೆ ಅನುದಾನ ಹಂಚಿಕೆಯಲ್ಲಾಗುತ್ತಿರುವ ತಾರತಮ್ಯದ ಬಗ್ಗೆಯೂ ಚರ್ಚೆ ನಡೆಸುವುದಾಗಿ ತಿಳಿಸಿದರು.
ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ನಿರಾಕರಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಬೆಂಗಳೂರಿನ ಗೌರವ ಉಳಿಸಲು ಐಪಿಎಲ್ ಸೇರಿದಂತೆ ಕ್ರಿಕೆಟ್ ಪಂದ್ಯಾವಳಿ ನಡೆಯಬೇಕು ಎಂಬುದು ನನ್ನ ಅಭಿಪ್ರಾಯ ಎಂದರು. ಬೆಂಗಳೂರಿನ ಗೌರವ ಉಳಿಸಬೇಕು, ಅದಕ್ಕಾಗಿ ಷರತ್ತುಗಳನ್ನು ವಿಧಿಸಿ, ಕ್ರಿಕೆಟ್ ಪಂದ್ಯಾವಳಿ ನಡೆಸಲು ಅನುಮತಿ ನೀಡಬೇಕು. ಈ ಕುರಿತು ನಿರ್ಣಯ ಕೈಗೊಳ್ಳಲು ಗೃಹ ಸಚಿವರಿಗೆ ಜವಾಬ್ದಾರಿ ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕ್ರಿಕೆಟ್ ಪಂದ್ಯಾವಳಿಗಳಿಗೆ ಅನುಮತಿ ನೀಡಬಾರದು ಎಂಬ ಅಭಿಪ್ರಾಯ ಇಲ್ಲ. ಆದರೆ ಭದ್ರತೆ ವಿಚಾರವಾಗಿ ಎಚ್ಚರಿಕೆ ವಹಿಸಬೇಕು ಎಂಬುದು ಅವರ ನಿಲುವು ಎಂದರು.
