Friday, November 22, 2024
Homeರಾಜ್ಯಆದಾಯ ತೆರಿಗೆ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತದ್ದಾರೆ : ಡಿಕೆಶಿ

ಆದಾಯ ತೆರಿಗೆ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತದ್ದಾರೆ : ಡಿಕೆಶಿ

ಬೆಂಗಳೂರು,ಏ.26- ಆದಾಯ ತೆರಿಗೆ ಅಧಿಕಾರಿಗಳು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿದ್ದು, ಕಾಂಗ್ರೆಸ್‌ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ, ಲೋಕಸಭಾ ಚುನಾವಣೆ ಬಳಿಕ ತಾವು ಖುದ್ದಾಗಿ ಪೊಲೀಸ್‌ ಮಹಾನಿರ್ದೇಶಕರನ್ನು ಭೇಟಿ ಮಾಡಿ ದೂರು ನೀಡುವುದರ ಜೊತೆಗೆ ಸಂತ್ರಸ್ತರ ಮೂಲಕ ಪ್ರಮಾಣಪತ್ರ ದಾಖಲಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ಅಧಿಕಾರಿಗಳು ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿಯ ಮೇಲೆ ದಾಳಿಯನ್ನು ನಡೆಸುತ್ತಿದ್ದಾರೆ. ಅದರಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ರೀತಿಯ ಬೆದರಿಕೆಗಳು ಹೆಚ್ಚಾಗಿವೆ ಎಂದರು.

ದಾಳಿ ನಡೆಸಿದ ವೇಳೆ ಅಧಿಕಾರಿಗಳು ನೀವು ಕಾಂಗ್ರೆಸ್‌ನಲ್ಲಿ ಏಕಿದ್ದೀರ, ಬಿಜೆಪಿಗೆ ಹೋಗಿ ಎಂದು ಒತ್ತಡ ಹೇರುತ್ತಿದ್ದಾರೆ. ಸಂಸದ ಡಿ.ಕೆ.ಸುರೇಶ್‌ ಅವರ ಕಾರು ಚಾಲಕ ಹಾಗೂ ಅವರ ಪತ್ನಿಯನ್ನು ವಿಚಾರಣೆ ನಡೆಸಿ ಕಿರುಕುಳ ನೀಡಲಾಗಿದೆ. ಇದರ ವಿರುದ್ಧ ತಾವು ಪ್ರಮಾಣಪತ್ರ ದಾಖಲಿಸುವುದಾಗಿ ಹೇಳಿದರು.

ಆದಾಯ ತೆರಿಗೆ ಅಧಿಕಾರಿಗಳು ಬಿಜೆಪಿಯ ಏಜೆಂಟರಂತೆ ನಡೆದುಕೊಳ್ಳುತ್ತಿದ್ದಾರೆ. ಪೊಲೀಸ್‌ ಮಹಾನಿರ್ದೇಶಕರಿಗೆ ಈ ಕುರಿತು ಖುದ್ದು ದೂರು ಸಲ್ಲಿಸುವುದಾಗಿ ಹೇಳಿದರು.ಬೆಂಗಳೂರು ಗ್ರಾಮಾಂತರದಲ್ಲಿ ಕೂಪನ್‌ಗಳನ್ನು ಹಂಚಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಅವರೇನು ಸತ್ಯ ಹರಿಶ್ಚಂದ್ರರೇ? ಬಿಜೆಪಿ ಮತ್ತು ಜೆಡಿಎಸ್‌ನಿಂದ ಏನು ಹಂಚಲಾಗುತ್ತಿದೆ ಎಂದು ನಮಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಅವರದೇ ಕುಟುಂಬದ ಅಭ್ಯರ್ಥಿ ಹಾಗೂ ಅವರ ಕುಟುಂಬದ ಸದಸ್ಯ ಹೆಣ್ಣುಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಚಾರಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ. ಇದರ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರೇ ಉತ್ತರ ನೀಡಬೇಕು ಎಂದರು.

ನಾವು ಯಾವುದೇ ಕೂಪನ್‌ಗಳನ್ನು ಹಂಚುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯ ಮಾಹಿತಿಯನ್ನು ನೀಡುವ ಕೆಲಸ ಮಾಡುತ್ತಿದ್ದೇವೆ. ಆರೋಪ ಮಾಡುತ್ತಿರುವ ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದೆಯೇ? ಅವರೇನು ಹಂಚುತ್ತಿದ್ದಾರೆ ನಮಗೆ ಗೊತ್ತಿಲ್ಲವೇ? ಕನಕಪುರ, ಚನ್ನಪಟ್ಟಣ, ರಾಮನಗರದಲ್ಲಿ ಏನು ಹಂಚುತ್ತಿದ್ದಾರೆ ಎಂಬುದಕ್ಕೆ ತಮ್ಮ ಬಳಿ ಸಾಕ್ಷಿಯಿದೆ. ರಾಜರಾಜೇಶ್ವರಿ ನಗರದಲ್ಲಿ ಚಿನ್ನದ ಕಾಯಿನ್‌ಗಳನ್ನು ಹಂಚುತ್ತಿರುವುದು ತಮಗೆ ಗೊತ್ತಿದೆ ಎಂದು ಹೇಳಿದರು.

ಮೊದಲ ಹಂತದ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 10 ರಲ್ಲಿ ಗೆಲುವು ಸಾಧಿಸಲಿದೆ. ಒಟ್ಟು ರಾಜ್ಯಾದ್ಯಂತ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಜೆಡಿಎಸ್‌ನ ಅಭ್ಯರ್ಥಿಗಳು 3 ಕಡೆ ಸೋಲುವುದರ ಜೊತೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿಯು ಸೋಲಲಿದ್ದಾರೆ ಎಂದರು.

ಕುಮಾರಸ್ವಾಮಿಯವರು ಧೈರ್ಯವಿಲ್ಲದೆ ರಣಹೇಡಿಯಂತೆ ಮಂಡ್ಯಕ್ಕೆ ಓಡಿ ಹೋಗಿದ್ದಾರೆ. ಅವರೇ ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧಿಸಬೇಕಿತ್ತು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.ರಾಜ್ಯಸರ್ಕಾರದ ಪಂಚಖಾತ್ರಿ ಯೋಜನೆಗಳು ಜನರಿಗೆ ಅನುಕೂಲವಾಗಿವೆ. ಬಿಜೆಪಿಯವರು ಜನಪರವಾಗಿ ಒಂದು ಯೋಜನೆಗಳನ್ನೂ ಜಾರಿಗೊಳಿಸಿಲ್ಲ. ಈ ಹಿಂದೆ ಯುಪಿಎ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರೂಪಿಸಿದ ಯೋಜನೆಗಳನ್ನು ನಿಲ್ಲಿಸಲು ಬಿಜೆಪಿಯವರಿಗೆ ಸಾಧ್ಯವಾಗಿಲ್ಲ ಎಂದು ಹೇಳಿದರು.

RELATED ARTICLES

Latest News