ಬೆಂಗಳೂರು, ಡಿ.24- ನಾಯಕತ್ವ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ನಾಯಕರು ಮಧ್ಯ ಪ್ರವೇಶಿಸುವಂತೆ ಮಾಡಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸುತ್ತಿದ್ದಾರೆ, ಈ ನಡುವೆ ಪ್ರಮುಖ ನಾಯಕರಾದ ಡಿ.ಕೆ.ಶಿವಕುಮಾರ್ ಅವರ ಭೇಟಿಗೆ ಸಮಯವನ್ನೇ ನೀಡದೆ ಸತಾಯಿಸುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆಯಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿ.ಕೆ.ಶಿವಕುಮಾರ್‌ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಾಗದೆ ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಆಯೋಜಿಸುತ್ತಿರುವ ಅಹಿಂದ ಸಮಾವೇಶಕ್ಕೆ ಕಡಿವಾಣ ಹಾಕುವ ಪ್ರಯತ್ನಗಳನ್ನು ಡಿ.ಕೆ.ಶಿವಕುಮಾರ್ ಮುಂದುವರಿಸಿದ್ದಾರೆ.
ಕೇಂದ್ರ ಸಚಿವರ ಜೊತೆ ರಾಜ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸುವ ಸಲುವಾಗಿ ದೆಹಲಿ ಪ್ರವಾಸದಲ್ಲಿರುವ ಡಿ.ಕೆ.ಶಿವಕುಮಾರ್ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಿಚಾರಗಳ ಚರ್ಚೆಗೆ ನಿರಂತರ ಪ್ರಯತ್ನ ನಡೆಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖರು ಡಿ.ಕೆ. ಶಿವಕುಮಾರ್ ಅವರ ಭೇಟಿಗೆ ಸಮಯವನ್ನೇ ನೀಡಿಲ್ಲ ಎನ್ನಲಾಗುತ್ತಿದೆ. ಇದು ಡಿಕೆ ಬಣವನ್ನು ಕೆರಳಿಸಿದ್ದು, ನಾಯಕತ್ವದ ಬದಲಾವಣೆಯಾಗಬೇಕು ಎಂಬ ಗೊಂದಲಗಳು ಮತ್ತಷ್ಟು ಉಲ್ಬಣಗೊಳ್ಳುವ ಮುನ್ಸೂಚನೆಯಿಇದೆ.
ಕಳೆದ ತಿಂಗಳು ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡಿದಾಗಲೂ ರಾಹುಲ್ ಗಾಂಧಿ ಭೇಟಿಗೆ ಸಮಯ ನೀಡಿಲಿಲ್ಲ. ಇದರಿಂದ ಕೆರಳಿದ ಡಿ.ಕೆ.ಶಿವಕುಮಾರ್, ಅಧಿಕಾರ ಹಂಚಿಕೆಯ ಸಂಬಂಧಪಟ್ಟಂತೆ ನಡೆದಿರುವ ಒಪ್ಪಂದದ ಜಾರಿಗೆ ಪಟ್ಟು ಹಿಡಿದಿದ್ದರು. ಇದು ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಿಸಿತ್ತು..
ಎಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಲವಾರು ಭಾರೀ ಭೇಟಿ ಮಾಡಿದ್ದ ಡಿ.ಕೆ.ಶಿವಕುಮಾರ್, ಅಧಿಕಾರಕ್ಕಾಗಿ ಹಕ್ಕೊತ್ತಾಯ ಮಾಡಿದ್ದರು. ಇದು ವರಿಷ್ಠ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿಯೇ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಭೇಟಿಗೆ ಸಮಯ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಕೆ.ಎನ್.ರಾಜಣ್ಣ, ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದು ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದಾರೆ. ಮತ್ತಷ್ಟು ವಿಚಾರಗಳ ಚರ್ಚೆಗೆ ಸಮಯ ನೀಡಬೇಕು ಎಂಬುದು ರಾಜಣ್ಣ ಅವರ ಒತ್ತಾಯವಾಗಿದೆ.ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಸಮಯ ನೀಡಿದ್ದ ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಅವರನ್ನು ಕಡೆಗಣಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮೂಲಕ ರಾಹುಲ್ ಗಾಂಧಿ ಭೇಟಿಗೆ ಡಿ.ಕೆ.ಶಿವಕುಮಾರ್ ಪ್ರಯತ್ನಿಸಿದ್ದಾರೆ. ಅದು ಕೂಡ ಸಾಧ್ಯವಾಗದೆ ದೆಹಲಿಯಿಂದ ಡಿ.ಕೆ.ಶಿವಕುಮಾರ್ ಬರೀ ಕೈಯಲ್ಲಿ ವಾಪಸ್ ಬರುವಂತಾಗಿದೆ.
ಇದೇ ತಿಂಗಳ 27ರಂದು ಕಾಂಗ್ರೆಸಿನ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸಭೆ ದೆಹಲಿಯಲ್ಲಿ ನಡೆಯುತ್ತಿದೆ. ಅದರಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ಆ ವೇಳೆಯಲ್ಲಿ ಅಧಿಕಾರ ಹಂಚಿಕೆಯ ಕುರಿತಂತೆ ಮಾತುಕತೆಗಳಾಗಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಹಠವಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು, ಗೊಂದಲಯವನ್ನು ಸೃಷ್ಟಿಸಿರುವುದು ಹೈಕಮಾಂಡ್ ಅಲ್ಲ. ರಾಜ್ಯ ನಾಯಕರೇ ಗೊಂದಲ ಮಾಡಿಕೊಂಡಿದ್ದಾರೆ ಅವರೇ ಬಗೆಹರಿಸಿಕೊಳ್ಳಲಿ ಎಂದು ಹೇಳಿರುವುದು ಡಿ.ಕೆ.ಶಿವಕುಮಾರ್ ಬಣಕ್ಕೆ ಭಾರೀ ಹಿನ್ನೆಡೆಯಾಗಿದೆ. ಹೀಗಾಗಿ ಹೈಕಮಾಂಡ್ ನಾಯಕರ ಸಮುಖದಲ್ಲಿ ಅಂತಿಮ ಸುತ್ತಿನ ಮಾತುಕತೆಗೆ ಮನವೊಲಿಸುವ ಪ್ರಯತ್ನವನ್ನು ಡಿ.ಕೆ.ಶಿವಕುಮಾರ್ ನಡೆಸುತ್ತಿದ್ದಾರೆ.
ಆದರೆ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ಡಿ.ಕೆ.ಶಿವಕುಮಾರ್ ಅವರ ಭೇಟಿಗೆ ಸಮಯ ನೀಡದೇ ಇರುವುದು ಕಾಂಗ್ರೆಸ್ಸನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
