ಬೆಂಗಳೂರು,ಏ.29- ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಹೆಸರು ಕೆಡಿಸಿಕೊಳ್ಳದ ಶ್ರೀನಿವಾಸಪ್ರಸಾದ್ ಸ್ವಾಭಿಮಾನಿ ಕಳಂಕರಹಿತ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಹಳೇ ಮೈಸೂರು ಭಾಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಶ್ರೀನಿವಾಸ್‌ಪ್ರಸಾದ್, ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದರು.
ರಾಜಕೀಯದ ಏಳು-ಬೀಳುಗಳ ನಡುವೆ ಸ್ವಾಭಿಮಾನಕ್ಕೆ ಹೆಸರಾಗಿದ್ದ ಶ್ರೀನಿವಾಸಪ್ರಸಾದ್ ಅವರು ಕಳೆದ ತಿಂಗಳು ರಾಜಕೀಯದಿಂದ ನಿವೃತ್ತಿ ಪಡೆದಿದ್ದರು. ಚುನಾವಣೆಯಲ್ಲಿ ಸೋಲು – ಗೆಲುವು ಕಂಡಿದ್ದರೂ ಎಂದಿಗೂ ಅವರು ಧೃತಿಗೆಡದೇ ಅಂಬೇಡ್ಕರ್ ಚಿಂತನೆ, ದಲಿತಪರ ಹೋರಾಟದ ಮುಖ್ಯ ಧ್ವನಿಯಾಗಿದ್ದರು.
ದಲಿತ ನಾಯಕರಾಗಿದ್ದ, ತುಳಿತಕ್ಕೆ ಒಳಗಾದ ಪರವಾಗಿ ಸದಾ ಧ್ವನಿ ಎತ್ತುತ್ತಿದ್ದ, ನೇರ-ನಿಷ್ಠುರವಾದಿಯಾಗಿದ್ದ ಪ್ರಸಾದ್ ಅವರು ಸಾಕಷ್ಟು ಬಾರಿ, ನಾನು ಹಲವಾರು ಪಕ್ಷಗಳನ್ನು ಬದಲಿಸಿರಬಹುದು. ಆದರೆ ತತ್ವ ಬಿಟ್ಟಿಲ್ಲ, ನಾನು ಪಕ್ಷಾಂತರಿ ಆಗಿರಬಹುದು. ಆದರೆ ತತ್ವಾಂತರಿಯಾಗಿಲ್ಲ. ಸ್ವಾಭಿಮಾನ ಬಿಟ್ಟಿಲ್ಲ ಎನ್ನುತ್ತಿದ್ದರು. ಅದರಂತೆಯೇ ನಡೆದುಕೊಂಡಿದ್ದರು. ರಾಜಕೀಯ ಜೀವನದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಉಂಟಾದಾಗ ಬಂಡಾಯವೆದ್ದಿದ್ದರು. ಪಕ್ಷ ಯಾವುದೇ ಇರಲಿ, ನಾಯಕ ಯಾರೇ ಇರಲಿ ಅವರನ್ನು ಬಿಟ್ಟು ಹೊರನಡೆದಿದ್ದ ಸ್ವಾಭಿಮಾನಿ ರಾಜಕಾರಣಿ ಎಂದೇ ಕರೆಯಿಸಿಕೊಂಡಿದ್ದರು.
ರಾಜಕೀಯ ಪ್ರವೇಶಿಸಿ 50 ವರ್ಷ ತುಂಬಿದ ಹಿನ್ನಲೆಯಲ್ಲಿ ಕಳೆದ ಮಾರ್ಚ್ 17 ರಂದು ಸುವರ್ಣ ಮಹೋತ್ಸವ ಆಚರಿಸಿ ಚುನಾವಣಾ ರಾಜಕೀಯ ಹಾಗೂ ಸಕ್ರಿಯ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ರಾಜಕೀಯ ನಿವೃತ್ತಿ ಘೋಷಿಸಿದ್ದರೂ ಸಹ ಪ್ರಸ್ತುತ ನಡೆದ ಲೋಕಸಭಾ ಚುನಾವಣೆಯಲ್ಲಿ ಶ್ರೀನಿವಾಸ್‌ಪ್ರಸಾದ್ ಅವರ ಬೆಂಬಲ ಪಡೆಯಲು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ಪ್ರಯತ್ನ ನಡೆಸಿದ್ದವು.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಅವರ ಮೈಸೂರಿನ ನಿವಾಸಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು. ಆದರೆ ಯಾರಿಗೆ ಬೆಂಬಲ ಘೋಷಿಸದ ಶ್ರೀನಿವಾಸ ಪ್ರಸಾದ್ ತಟಸ್ಥ ನಿಲುವು ತಾಳಿದ್ದರು.
ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಸಂಸದರು, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಗ್ರಾಹಕ ಸೇವೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. 2013ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಖಾತೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಒಟ್ಟು 14 ಚುನಾವಣೆಗಳನ್ನು ಎದುರಿಸಿದ್ದು, 8 ಚುನಾವಣೆಗಳಲ್ಲಿ ಗೆದ್ದಿದ್ದಾರೆ. 6 ಬಾರಿ ಸಂಸದರಾಗಿ 2 ಬಾರಿ ಶಾಸಕರಾಗಿದ್ದ ಪ್ರಸಾದ್ 7 ಪ್ರಧಾನಿಗಳನ್ನು ಕಂಡಿದ್ದಾರೆ. ಹೌದು, 1974 ರಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಡಿ.ಸತ್ಯನಾರಾಯಣ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಡಿಎಂಕೆ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಪ್ರಸಾದ್ ಕಣಕ್ಕೆ ಇಳಿಯುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು.ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲ ಅರಳಿಸಿದ್ದ ವಿ. ಶ್ರೀನಿವಾಸ ಪ್ರಸಾದ್ ಅವರಿಗೆ ಸಲ್ಲುತ್ತದೆ.
1974ರ ಮಾ.17ರಂದು ಮೈಸೂರಿನ ಕೃಷ್ಣರಾಜ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ವಿ. ಶ್ರೀನಿವಾಸ ಪ್ರಸಾದ್ ಅವರು ಪ್ರಥಮ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಗುರುತಿನಿಂದ ಸ್ಪರ್ಧಿಸಿದ್ದರು. ಅವರ ಸ್ಪರ್ಧೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಗಮನ ಸೆಳೆದಿತ್ತು.
1974ರಲ್ಲಿ ಸಂಸ್ಥಾ ಕಾಂಗ್ರೆಸ್ ಸೇರಿ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಹುರುಪಿನಿಂದ ಸಂಘಟನೆ ಮಾಡಿ ಗಮನ ಸೆಳೆದಿದ್ದರು. ತುರ್ತು ಪರಿಸ್ಥಿತಿ ಬಳಿಕ ಜಯಪ್ರಕಾಶ್ ಕರೆ ನೀಡಿದಂತೆ ವಿಪಕ್ಷಗಳು ಸೇರಿ ಒಂದು ಪಕ್ಷ – ಒಂದು ಧ್ವಜ ರಚಿಸಿಕೊಂಡು ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು.
1977ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಲೋಕದಳ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿ.ರಾಚಯ್ಯ ವಿರುದ್ಧ ಪರಾಭವಗೊಂಡಿದ್ದರು. 1978ರಲ್ಲಿ ಟಿ. ನರಸಿಪುರ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಇಂದಿರಾ ಕಾಂಗ್ರೆಸ್ನ ಅಭ್ಯರ್ಥಿ 28,061 ಮತಗಳನ್ನು ಪಡೆದ ಪಿ. ವೆಂಕಟರಮಣ ಗೆದ್ದರೆ ಶ್ರೀನಿವಾಸಪ್ರಸಾದ್ 20,034 ಪಡೆದು ಮೂರನೇ ಚುನಾವಣೆಯಲ್ಲೂ ಪರಾಭವಗೊಂಡಿದ್ದರು.
1980ರ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಶ್ರೀನಿವಾಸ ಪ್ರಸಾದ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದು ಬಿ.ರಾಚಯ್ಯ ವಿರುದ್ಧ ಗೆದ್ದು ಮೊದಲ ಬಾರಿ ಸಂಸತ್ ಸದಸ್ಯರಾಗಿದ್ದರು. ಆ ಚುನಾವಣೆಯಲ್ಲಿ ಪ್ರಸಾದ್ 2,28,748 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಯು.ಬಿ.ರಾಚಯ್ಯ ಅವರಿಗೆ 1,18,287, ಜನತಾ ಪಕ್ಷದ ಸಿದ್ದಯ್ಯಗೆ 36 ಸಾವಿರ ಮತಗಳು ಬಂದಿದ್ದವು.
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತಾಯಿ ಠೇವಣಿ ಹಣವನ್ನು ಕೊಟ್ಟು ಶುಭ ಹಾರೈಸಿದ್ದರು ಎಂದು ಸ್ವಾಭಿಮಾನಿಯ ನೆನಪುಗಳು ಎಂಬ ತಮ್ಮ ಜೀವನಗಾಥೆಯಲ್ಲಿ ಪ್ರಸಾದ್ ದಾಖಲಿಸಿದ್ದಾರೆ.
ಮೊದಲ ಬಾರಿ 1980 ರಲ್ಲಿ ಸಂಸದರಾದ ಬಳಿಕ ಪ್ರಸಾದ್ 1984, 1989, 1991 ಹೀಗೆ ಸತತ ನಾಲ್ಕು ಚುನಾವಣೆಗಳಲ್ಲಿ ಜಯ ಗಳಿಸಿದ್ದರು. 1984ರಲ್ಲಿ ಜನತಾ ಪಕ್ಷದ ಮಲ್ಲೇಶಯ್ಯ, 1989ರಲ್ಲಿ ಜನತಾ ದಳದ ದೇವನೂರು ಶಿವಮಲ್ಲು 1991ರಲ್ಲಿ ಜನತಾದಳದ ಡಾ.ಎಚ್.ಸಿ. ಮಹಾದೇವಪ್ಪ ಅವರನ್ನು ಶ್ರೀನಿವಾಸಪ್ರಸಾದ್ ಸೋಲಿಸಿದ್ದರು.
1996ರ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿಕೆಟ್ ಸಿಗದೇ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡರು. ಸಂಯುಕ್ತರಂಗ ಸರ್ಕಾರ ಉರುಳಿದ್ದರಿಂದ 1998ರಲ್ಲಿ ಮತ್ತೇ ಚುನಾವಣೆ ಎದುರಾಗಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದರು. ಆದರೆ, ಎರಡನೇ ಬಾರಿ ಎ. ಸಿದ್ದರಾಜು ಜನತಾ ದಳದಿಂದ ಆಯ್ಕೆಯಾಗಿದ್ದರು.
ಎಐಡಿಎಂಕೆ ಜಯಲಲಿತಾ ತಮ್ಮ ಬೆಂಬಲ ವಾಪಾಸ್ ಪಡೆದಿದ್ದರಿಂದ 1999ರಲ್ಲಿ ಮತ್ತೊಮ್ಮೆ ಲೋಕಸಭಾ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್ ಜೆಡಿಯುನಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ. ಸಿದ್ದರಾಜು ಅವರನ್ನು ಸೋಲಿಸಿದರು.
ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ರಾಮಕೃಷ್ಣ ಹೆಗಡೆ, ಜಾರ್ಜ್ ಫರ್ನಾಂಡೀಸ್ ಅವರಿಂದಾಗಿ ಶ್ರೀನಿವಾಸಪ್ರಸಾದ್ ಅವರಿಗೆ ಕೇಂದ್ರ ಮಂತ್ರಿ ಸ್ಥಾನ ಒಲಿಯಿತು. ಬಳಿಕ, ಜಾರ್ಜ್ ಫರ್ನಾಂಡೀಸ್ ಅವರೊಂದಿಗೆ ಗುರುತಿಸಿಕೊಂಡು ಸಮತಾ ಪಾರ್ಟಿ ಸೇರಿ 2004ರ ಚುನಾವಣೆ ವೇಳೆಗೆ ಜೆಡಿಎಸ್ ಸೇರಿ ತಮ್ಮ ಬೆಂಬಲಿಗರಾದ ಕಾಗಲವಾಡಿ ಶಿವಣ್ಣಗೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡಿದ್ದರು.
ಬಳಿಕ ಮತ್ತೆ ಕಾಂಗ್ರೆಸ್ ನತ್ತ ವಾಲಿದ್ದ ಪ್ರಸಾದ್ 2008ರಲ್ಲಿ ನಂಜನಗೂಡು ಕ್ಷೇತ್ರದಿಂದ ಗೆದ್ದು ಮೊದಲ ಬಾರಿ ಶಾಸಕರಾಗಿದ್ದರು. ಬಳಿಕ, 2013ರಲ್ಲೂ ನಂಜನಗೂಡು ಕ್ಷೇತ್ರದಿಂದ ಆಯ್ಕೆಯಾಗಿ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಸಚಿವ ಸಂಪುಟ ಪುನಾರಚನೆ ಹೊತ್ತಲ್ಲಿ ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ನಿಂದ ಹೊರ ಬಂದಿದ್ದರು. ಬಳಿಕ, ಬಿಜೆಪಿ ಸೇರಿ ನಂಜನಗೂಡು ಉಪ ಚುನಾವಣೆಯಲ್ಲಿ ಪರಭಾವಗೊಂಡರು.
2019ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮುಖಂಡರು, ಅಭಿಮಾನಿಗಳ ಒತ್ತಡಕ್ಕೆ ಮಣಿದು ಸ್ಪರ್ಧಿಸಿ ಮೊದಲ ಬಾರಿಗೆ ಚಾಮರಾಜನಗರದಲ್ಲಿ ಕಮಲ ಅರಳಿಸಿದ್ದರು.
ರಾಜಕೀಯ ಹಿನ್ನಲೆ
-ಚಾಮರಾಜನಗರ ಕ್ಷೇತ್ರದಿಂದ 7 ಬಾರಿ ಸಂಸದರಾಗಿದ್ದರು.
-ನಂಜನಗೂಡು ಕ್ಷೇತ್ರದಿಂದ 2 ಬಾರಿ ಶಾಸಕರಾಗಿದ್ದರು.
-1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿದ್ದರು.
-2013ರಿಂದ 2016ರವರೆಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಕಂದಾಯ ಮತ್ತುಮುಜರಾಯಿ ಸಚಿವರಾಗಿದ್ದರು .
-24 ಡಿಸೆಂಬರ್ 2016ರಂದು ಅಧಿ ಕೃತವಾಗಿ ಬಿಜೆಪಿ ಸೇರ್ಪಡೆಯಾದರು.
-2017ರಲ್ಲಿ ನಂಜನಗೂಡು ಉಪಚುನಾವಣೆಯಲ್ಲಿ ಸೋಲು
-2019ರಲ್ಲಿ ಚಾಮರಾಜನಗರ ಸಂಸದರಾಗಿ ಆಯ್ಕೆಯಾದರು.
-2024 ಮಾರ್ಚ್ 17ರಂದು ರಾಜಕೀಯ ನಿವೃತ್ತಿ ಪಡೆದರು.