ಬೆಂಗಳೂರು, ಡಿ.24- ಬೆಂಗಳೂರು- ಮೈಸೂರು ಇನ್ಫಾಸ್ಟ್ರಕ್ಚರ್ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ನನ್ನನ್ನು ಪಾರ್ಟಿ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೆಲವು ರೈತರು ಹಾಗೂ ನನ್ನನ್ನು ಪಾರ್ಟಿಯನ್ನಾಗಿ ಮಾಡಲಾಗಿದೆ. ಹಿರಿಯ ವಕೀಲ ಉದಯಹೊಳ್ಳ ಅವರು ಈ ಹಿಂದೆ ಪತ್ರ ಬರೆದು ನೀವು ಮಾತನಾಡಬಾರದು ಎಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯೋಜನೆ ವಿಚಾರದಲ್ಲಿ ರೈತರಿಗೆ ಆಗಿರುವ ಅನ್ಯಾಯ ಹಾಗೂ ಅಕ್ರಮಗಳ ಕುರಿತು ಪತ್ರ ಬರೆದಿದ್ದು, ಅವರು ಪ್ರತಿಯಾಗಿ ಹಿಂಬರಹವನ್ನು ನೀಡಿದ್ದಾರೆ. ಈ ರಿಟ್ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಏನು ಮಾಡುತ್ತದೋ ಗೊತ್ತಿಲ್ಲ.
ನಾನು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿದ್ದರು. ಬಿಎಂಐಸಿ ಯೋಜನೆಗೆ ಹಣಕಾಸು ಇಲಾಖೆಯ ಸಹಮತಿಯೂ ಇತ್ತು. ಆಗ ಯೋಜನೆಗೆ ಎಂಓಯು ಮಾಡಿಕೊಳ್ಳಲಾಗಿತ್ತು ಎಂದರು.
ಈ ಯೋಜನೆ ಬೆಂಗಳೂರು ನಗರ, ಮಂಡ್ಯ, ಮೈಸೂರು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದ್ದಾಗಿತ್ತು. ಐದು ಟೌನ್‌ಶಿಪ್ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಒಪ್ಪಂದವಾಗಿತ್ತು. ಈ ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಫೀಸ್ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ. ನೈಸ್ ಕಂಪನಿ ವಿಚಾರದಲ್ಲಿ ಕಾನೂನು ಸಲಹೆಗಾರರಿಗೆ 55 ಲಕ್ಷ ರೂ. ಕೊಡುತ್ತಿದ್ದಾರಂತೆ. ರಾಜ್ಯಸರ್ಕಾರದ ಅಡ್ವಕೇಟ್ ಜನರಲ್, ಕಾನೂನು ಸಲಹೆಗಾರರು ಇದ್ದರೂ ಕೂಡ ಇನ್ನೊಬ್ಬರನ್ನು ನೈಸ್ ಕಂಪನಿಗೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಅವರು ಟೀಕಿಸಿದರು.
ನನಗೆ ಇನ್ನೂ ಹೋರಾಟದ ಕೆಚ್ಚಿದೆ. ಒಂದು ಲಕ್ಷಕ್ಕೂ ಹೆಚ್ಚು ನೌಕರರು ಹೊರಗುತ್ತಿಗೆ ಮೂಲಕ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಹುದ್ದೆಗಳು ಭರ್ತಿಯಾಗದೇ ಖಾಲಿ ಉಳಿದಿವೆ. ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದರೆ ಎಷ್ಟು ಹೊರಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದರು.
ಬಡವರ ಬಗ್ಗೆ ಎಲ್ಲಿಲ್ಲದ ಅನುಕಂಪ ಮುಖ್ಯಮಂತ್ರಿಗಿದೆ. ಮುಖ್ಯಮಂತ್ರಿ ಕಚೇರಿಯಲ್ಲೇ ಏಳೆಂಟು ಮಂದಿ ಕ್ಯಾಬಿನೆಟ್ ದರ್ಜೆಯವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಇವರ ಆಡಳಿತದ ವೈಖರಿ ಎಂದು ಚಾಟಿ ಬೀಸಿದರು.
ಪ್ರಯೋಜನವಿಲ್ಲ :
ಪ್ರತಿಯೊಂದು ವಿಚಾರದಲ್ಲೂ ಕೇಂದ್ರ ಸರ್ಕಾರವನ್ನು ದೂರುವುದರಿಂದ ಏನೂ ಸಾಧನೆ ಮಾಡಲಾಗದು. ಸಿದ್ದರಾಮಯ್ಯನವರು ಹಣಕಾಸು ಸಚಿವರಾಗಿದ್ದಾಗ ಕೇಂದ್ರ ಸರ್ಕಾರದಲ್ಲಿ ಮನಮೋಹನಸಿಂಗ್ ಅವರು ಕೂಡ ಹಣಕಾಸು ಸಚಿವರಾಗಿದ್ದರು. ನಮ ಪ್ರಣಾಳಿಕೆಯ ಭರವಸೆಯಂತೆ ರೈತರ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾ ಮಾಡಲು ಪತ್ರ ಬರೆದಾಗ ಕೇಂದ್ರ ಹಣಕಾಸು ಸಚಿವರು ಮನಮೋಹನ್‌ಸಿಂಗ್, ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್, ನಬಾರ್ಡ್ ಯಾರೂ ಕೂಡ ಒಪ್ಪಿಗೆ ಕೊಡಲಿಲ್ಲ. ಈ ರಾಜ್ಯಸರ್ಕಾರ ಬೆಳಗಿನಿಂದ ಸಂಜೆಯವರೆಗೂ ಕೇಂದ್ರ ಸರ್ಕಾರದ ಆಪಾದನೆ ಮಾಡಿದರೆ ಏನು ಪ್ರಯೋಜನ? , ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಭೆಗೆ ಹೋಗಿ ರಾಜ್ಯಕ್ಕೆ ಏನು ಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿ ಹೋರಾಟ ಮಾಡಬೇಕು. ಸಂಸದರಾಗಿ ನಾವು ನಮ ಕರ್ತವ್ಯವನ್ನು ನಿಭಾಯಿಸುವುದರಲ್ಲಿ ಹಿಂದೆ ಬೀಳುವುದಿಲ್ಲ ಎಂದರು.
ಎರಡು ಸಮಾವೇಶ : ಜ.30 ರಂದು ಸಂಸತ್‌ನ ಜಂಟಿ ಅಧಿವೇಶನ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಜ.23 ರಿಂದ 25ರ ನಡುವೆ ಹಾಸನ ಹಾಗೂ ಬಾಗಲಕೋಟೆ ಭಾಗದಲ್ಲಿ ತಲಾ ಒಂದು ಪಕ್ಷದ ಸಮಾವೇಶ ನಡೆಸಲಾಗುವುದು. ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೂ ಹೇಳಿದ್ದೇನೆ. ರಾಜ್ಯಸರ್ಕಾರದ ವೈಫಲ್ಯಗಳು ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸದಿರುವುದರ ಬಗ್ಗೆ ಸಮಾವೇಶದಲ್ಲಿ ಪ್ರಸ್ತಾಪಿಸಲಾಗುವುದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದು, ಹಾಸನ ಜಿಲ್ಲೆಯಲ್ಲಿ ಎರಡು ಸಮಾವೇಶಗಳನ್ನು ಮಾಡಿದ್ದಾರೆ. ದೇವೇಗೌಡರ ತವರು ಜಿಲ್ಲೆಯನ್ನು ಮುಗಿಸಬೇಕು ಎಂಬ ಉದ್ದೇಶವಿದೆಯೋ ಏನೋ ಗೊತ್ತಿಲ್ಲ ಎಂದು ಹೇಳಿದರು. ನನಗೆ ನಡೆಯಲು ಆಗುವುದಿಲ್ಲ, ಆದರೆ ಪ್ರವಾಸ ಮಾಡಲು ತೊಂದರೆಯಿಲ್ಲ.
60 ವರ್ಷಗಳ ರಾಜಕೀಯದಲ್ಲಿ ನಡೆದಿರುವ ವಿಚಾರಗಳ ಬಗ್ಗೆ ವಿಶ್ಲೇಷಣೆ ಮಾಡುವ ಶಕ್ತಿಯನ್ನು ಭಗವಂತ ಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ನನ್ನ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು, ಅದನ್ನು ಅನಾವರಣ ಮಾಡುವ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ನಾನು ಹೋಗುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಜವರಾಯಿಗೌಡ, ವಿಧಾನಪರಿಷತ್ ಮಾಜಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ, ಪಕ್ಷದ ಮುಖಂಡರಾದ ರಮೇಶ್, ರೋಶನ್ ಅಬ್ಬಾಸ್ ಹಾಜರಿದ್ದರು.
