ಬೆಂಗಳೂರು,ಡಿ.24- ತನ್ನ ಆಂತರಿಕ ಕಚ್ಚಾಟದಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೊರ ಬರದಿದ್ದರೆ, ಮುಂದಿನ ವಿಧಾನಸಭೆ ಚುನಾಣೆಯಲ್ಲಿ ರಾಜ್ಯದ ಜನತೆ ಇವರನ್ನು ಮನೆಗೆ ಶಾಶ್ವತವಾಗಿ ಕಳುಹಿಸುವುದು ಗ್ಯಾರಂಟಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಕೊಳ್ಳಿ ಇಡಲು ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರೊಬ್ಬರೇ ಸಾಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಬ್ಬ ವೀಕ್ ಲೀಡರ್ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆಯುತ್ತಾರೆ. ಪ್ರತಿದಿನ ಒಂದಿಲ್ಲೊಂದು ಕಚ್ಚಾಟ ನಡೆಯುತ್ತಲೇ ಇದೆ. ಈ ಪರಿಸ್ಥಿತಿ ಹೀಗೆ ಮುಂದುವರೆದರೆ ಕಾಂಗ್ರೆಸ್ ಮನೆಗೆ ಹೋಗುವುದು ಗ್ಯಾರಂಟಿ ಎಂದು ಕುಹುಕವಾಡಿದರು.
ಉರಿಯುವ ಬೆಂಕಿಗೆ ತುಪ್ಪ ಸುರಿಯಬೇಡಪ್ಪ ಎಂದು ಸದನದಲ್ಲಿ ಸಿಎಂ ನನಗೆ ಹೇಳಿದರು. ಈಗ ಅವರ ಶಿಷ್ಯ ರಾಜಣ್ಣ ಕೊಳ್ಳಿ ಇಡಲು ಹೊರಟ್ಟಿದ್ದಾರೆ. ಅಂದರೆ ಅವರು ಡಿಕೆಶಿ ವಿರುದ್ದ ಇದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನೀವೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದರರ್ಥ ಹೈಕಮಾಂಡ್‌ಗೂ ವೀಕ್ ಆಗಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಮೇಲಿಂದ ಮೇಲೆ ಡಿನ್ನರ್ ಪಾಲಿಟಿಕ್ಸ್ ಮಾಡುತ್ತಲೇ ಇದ್ದಾರೆ. ಡಿಕೆ ಶಿವಕುಮಾರ್ ಟೆಂಪಲ್ ರನ್ ಮಾಡುತ್ತಿದ್ದಾರೆ. ಅಧಿವೇಶಕ್ಕೂ ಶಿವಕುಮಾರ್ ಬರುತ್ತಿರಲಿಲ್ಲ. ಅಧಿವೇಶನ ನಡೆಯುತ್ತಿರುವಾಗ ಜನಪ್ರತಿನಿಧಿಯಾಗಿ ಕೆಲಸ ಮಾಡಬೇಕಿತ್ತು. ಅದು ಬಿಟ್ಟು ಜನರ ತೆರಿಗೆ ಹಣದಲ್ಲಿ ದೇವಸ್ಥಾನ ಸುತ್ತಿ ಬಂದಿದ್ದಾರೆ. ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ ಎನ್ನುತ್ತಿದ್ದಾರೆ. ಅದರ ಬದಲಿಗೆ ತಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ನಾಯಕತ್ವ ಈ ಬಾರಿಯ ಅಧಿವೇಶನ ಬರೀ ಕಾಂಗ್ರೆಸ್ ನಲ್ಲಿ ಡಿನ್ನರ್ ಗೆ ಸೀಮಿತ ಆಗಿತ್ತು. ಸಿದ್ದರಾಮಯ್ಯ ಆರೋಗ್ಯ ಕೆಟ್ಟಿತ್ತು ಎಂದು ಸದನಕ್ಕೆ ಬಂದಿಲ್ಲ ಅಂದರು. ಆದರೆ ಸರ್ಕಾರದಲ್ಲಿನ ಆರೋಗ್ಯ ಸರಿಯಿಲ್ಲದೇ ಅವರು ಬಂದಿರಲಿಲ್ಲ. ಕಾಂಗ್ರೆಸ್ ಸಂಪೂರ್ಣ ಒಡೆದ ಮನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಬೆಳಗಾವಿ ಅಧಿವೇಶನದಲ್ಲಿ ಈ ಬಾರಿ ಒಟ್ಟು 21 ಗಂಟೆಗಳ ಕಾಲ ಚರ್ಚೆ ನಡೆದಿದೆ. ಅಧಿವೇಶನದ ಇತಿಹಾಸದಲ್ಲೇ ಇಷ್ಟು ದೊಡ್ಡ ಸಮಯ ಚರ್ಚೆಯಾಗಿರುವುದು ಇದೇ ಮೊದಲು. ಮುಖ್ಯಮಂತ್ರಿ ಈ ಬಾರಿ ಇಲ್ಲಿಗೆ ಏನಾದರೂ ಹೊಸ ಯೋಜನೆಗಳನ್ನು ಘೋಷಣೆ ಮಾಡಬಹುದೆಂದು ಭರವಸೆ ಇಟ್ಟುಕೊಂಡಿದ್ದೆವು. ಅದು ಕೂಡ ಹುಸಿಯಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಈ ಸರ್ಕಾರದಲ್ಲಿ ಸಿಎಂ ಕುರ್ಚಿ ಒಳ ಜಗಳದಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ನಿಂತುಹೋಗಿವೆ. ಆದರೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ಮಾತ್ರ ವ್ಯಾಪಕವಾಗಿ ನಡೆಯುತ್ತಲೇ ಇದೆ. ಎಲ್ಲದರಲ್ಲೂ ಕಮೀಷನ್ ಮಾತ್ರ ಎಗ್ಗಿಲ್ಲದೆ ನಡೆಯುತ್ತದೆ ಎಂದು ಆರೋಪಿಸಿದರು.
ಇನ್ನು ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಿಗೆ ಎರಡು ತಿಂಗಳು ಬಾಕಿ ಹಣವನ್ನು ಬಿಡುಗಡೆ ಮಾಡದಿರುವುದು ಬಹುದೊಡ್ಡ ಹಗರಣವಾಗಿದೆ. ಇದು 5000 ಕೋಟಿ ಹಗರಣ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಯಾವ ಖಾತೆಗೆ ಹೋಗಿದೆ? ಎಲ್ಲಿಗೆ ಹೋಗಿದೆ? ಇದರ ಬಗ್ಗೆ ಸಚಿವರು ಉತ್ತರವನ್ನೇ ಕೊಡುತ್ತಿಲ್ಲ. ಅವರು ಬೆಂಗಳೂರಿಗೆ ಏಕೆ ಬರುತ್ತಿಲ್ಲ ಎಂದು ಅಶೋಕ್ ಪ್ರಶ್ನೆ ಮಾಡಿದರು.
ಯಾವುದೇ ಹಣ ಬಿಡುಗಡೆ ಮಾಡಿಲ್ಲ, ಆದರೆ ಹಣ ಹೊಡೆಯುವ ಕೆಲಸ ಮಾಡಿದರು. ಕಳೆದ ವರ್ಷದ ಗೃಹ ಲಕ್ಷಿ ಹಣ ಫೆಬ್ರವರಿ ಮಾರ್ಚ್ ನ 5000 ಕೋಟಿ ಕೊಟ್ಟಿರಲಿಲ್ಲ. 1 ಕೋಟಿ 26 ಲಕ್ಷ ಮಹಿಳೆಯರಿಗೆ ದ್ರೋಹ ಮಾಡಿದ್ದಾರೆ. ಗೃಹಲಕ್ಷಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗುವ ತನಕ ನಾವು ಹೋರಾಟ ಮಾಡುತ್ತೇವೆ. ಸದನದಲ್ಲಿ ಬಿಜೆಪಿ ಇದನ್ನು ಎಚ್ಚರಿಸುವ ಕೆಲಸ ಮಾಡಿದೆ ಎಂದು ಹೇಳಿದರು.
ಕಳೆದ ಬಜೆಟ್‌ನಲ್ಲಿ ಈ ಯೋಜನೆಗೆ ಅನುದಾನ ಮೀಸಲಿಡಲಾಗಿತ್ತು. ಹಾಗಾದರೆ ಹಣವನ್ನು ಏಕೆ ಬಿಡುಗಡೆ ಮಾಡಿಲ್ಲ? ಹಣ ಇಲ್ಲವೇ ಅಥವಾ ಸರ್ಕಾರ ದಿವಾಳಿಯಾಗಿದೆಯೇ? ಹಣ ಕೊಡದೆ ಫಲಾನುಭವಿಗಳಿಗೆ ಟೋಪಿ ಹಾಕಲು ಮುಚ್ಚಿಟ್ಟೀದ್ದೀರಾ? ಸದನದಲ್ಲಿ ನಾವು ಕೇಳಿದರೆ ನಾಳೆ ಬಾ, ನಾಳೆ ಬಾ ಎಂದರು.
ಎಲ್ಲಿಯವರೆಗೆ ಮಹಿಳೆಯರ ಖಾತೆಗೆ ಹಣ ಹಾಕುವುದಿಲ್ಲವೋ? ನಮ ಹೋರಾಟ ಮುಂದುವರೆಯುತ್ತದೆ. 8-10 ಜಿಲ್ಲೆಗಳಿಂದ ಮಾಹಿತಿ ಪಡೆದುಕೊಂಡೆವು. ನಂತರ ಅಧಿಕಾರಿಗಳಿಗೆ ಧಮ್ಕಿ ಹಾಕಿ ಮುಚ್ಚಿಟ್ಟಿದ್ದಾರೆ ಎಂದು ದೂರಿದರು. ಕರ್ನಾಟಕ ಕಾನೂನು ಸುವ್ಯವಸ್ಥೆ ಬಗ್ಗೆ ನಾನು ಕೇಳಿದರೆ ಗೃಹಸಚಿವರು ರಾಷ್ಟ್ರದ ಬಗ್ಗೆ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಫೋಕ್ಸೋ ಕೇಸ್, ಅತ್ಯಾಚಾರ, ಹಲ್ಲೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳ ವಿರೋಧದ ನಡುವೆಯೂ ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕರಿಸಿರುವ ಕರ್ನಾಟಕ ದ್ವೇಷ ಭಾಷಣ ಕಾಯ್ದೆಯನ್ನು ರಾಜ್ಯಪಾಲರು ಯಾವುದೇ ಕಾರಣಕ್ಕೂ ಅಂಗೀಕಾರ ಮಾಡಬಾರದು. ಈ ಬಗ್ಗೆ ನಾವು ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ತಿಳಿಸಿದರು.
ಈ ಮಸೂದೆಯಿಂದ ಮುಂದೆ ಮಾಧ್ಯಮಗಳು, ಯಾವುದೇ ರೀತಿಯ ಕಾರ್ಟೂನ್ ಆಗಲಿ, ಸ್ಕ್ಯಾಂಡಲ್ ಆಗಲಿ ತೋರಿಸಲು ಆಗುವುದಿಲ್ಲ. ಇದು ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಿ, ಜೈಲಿಗೆ ಕಳುಹಿಸಲು ತಂದಿರುವ ವಿಧೇಯಕ ಎಂದು ಕಿಡಿಕಾರಿದರು.
ನಾವು ಈ ವಿಧೇಯಕವನ್ನು ವಿರೋಧ ಮಾಡಿದ್ದೇವೆ. ಗವರ್ನರ್ ಅವರು ಊರಿಗೆ ಹೋಗಿದ್ದಾರೆ. ಅವರು ಡಿಸೆಂಬರ್ 29ಕ್ಕೆ ಬೆಂಗಳೂರಿಗೆ ವಾಪಸ್ಸು ಆಗಬಹುದು. ಆ ನಂತರ ನಾವು ಅವರನ್ನು ಭೇಟಿ ಯಾಗಿ ವಿಧೇಯಕಕ್ಕೆ ತಡೆ ನೀಡುವಂತೆ ಮನವಿ ಮಾಡುತ್ತೇವೆ.ಕರ್ನಾಟಕದ ಕೆಲವು ಕಡೆಗಳಲ್ಲಿ ಸ್ಥಳೀಯ ಸಂಸ್ಥೆ ಗಳಲ್ಲಿ ಚುನಾವಣೆ ನಡೆದಿದೆ. ಆ ಎಲ್ಲಾದರಲ್ಲೂ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದೆ. ಕಾಂಗ್ರೆಸ್ ಸರ್ಕಾರ ತೊಲಗಲು ಇದು ಮುನ್ಸೂಚನೆ ಎಂದು ಅವರು ಎಚ್ಚರಿಸಿದರು.
ವಿಜಯೇಂದ್ರ ನಮ್ಮ ನಾಯಕ :
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಇದ್ದಾರೆ. ಅವರನ್ನು ಬದಲಾವಣೆ ಮಾಡಿ ಎಂದು ನಾವ್ಯಾರು ಕೇಳಿಲ್ಲ. ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಷ್ಟ್ರೀಯ ಕಾರ್ಯಾಧ್ಯಕ್ಷರ ನೇಮಕವಾದ ಹಿನ್ನೆಲೆಯಲ್ಲಿ ಅವರಿಗೆ ಶುಭ ಕೋರಲು ದೆಹಲಿಗೆ ಹೋಗಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಗೊಂದಲ ಎಂದು ಅಶೋಕ್ ಸ್ಪಷ್ಟಪಡಿಸಿದರು.
