ಬೆಂಗಳೂರು,ಮೇ.1- ರಾಜ್ಯದಲ್ಲಿ ಒಣಹವೆ ಮುಂದುವರೆಯುತ್ತಿದ್ದು, ವಾರಾಂತ್ಯದವರೆಗೂ ಬಿಸಿಗಾಳಿಯ ವಾತಾವರಣ ಇರಲಿದೆ. ತಾಪಮಾನದಲ್ಲಿ ನಿರಂತರವಾಗಿ ಏರಿಕೆಯಾಗಿದ್ದು, ಹಗಲಿನ ವೇಳೆ ಸುಡುಬಿಸಿಲಿನ ಜೊತೆಗೆ ಬಿಸಿಗಾಳಿಯ ವಾತಾವರಣ ಇರುವುದರಿಂದ ಜನರು ಸುರಕ್ಷತಾ ಕ್ರಮಗಳನ್ನು ವಹಿಸುವಂತೆ ಹವಾಮಾನ ಇಲಾಖೆ ಸಲಹೆ ಮಾಡಿದೆ.
ಮೇ 4 ರವರೆಗೂ ಒಣಹವೆ ರಾಜ್ಯದಲ್ಲಿ ಕಂಡುಬರಲಿದ್ದು, ಮಳೆಯಾಗುವ ಸಾಧ್ಯತೆಗಳು ತೀರಾ ವಿರಳ. ಈ ಅವಧಿಯಲ್ಲಿ ಬಿಸಿಗಾಳಿ ಹೆಚ್ಚಾಗಲಿದೆ. ಅದರಲ್ಲೂ ಬಿಸಿಲ ನಾಡೇ ಎಂದೇ ಪರಿಗಣಿತವಾಗಿರುವ ಕಲ್ಯಾಣ ಕರ್ನಾಟಕದ ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ, ಬೀದರ್, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಈಗಾಗಲೇ 40 ಡಿ.ಸೆಂ. ನಷ್ಟು ದಾಟಿದೆ.
ಮಧ್ಯಾಹ್ನದ ವೇಳೆ ಸಾಧ್ಯವಾದಷ್ಟು ಮನೆ, ಕಚೇರಿಯಿಂದ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಿ, ಅನಿವಾರ್ಯವಾದರೆ ಕೊಡೆ ಸೇರಿದಂತೆ ನೆರಳಿನ ಆಶ್ರಯ ಪಡೆದು, ಸಾಕಷ್ಟು ದ್ರವ ಪದಾರ್ಥಗಳನ್ನು ಸೇವಿಸಿ ಎಂಬ ಸಲಹೆ ಮಾಡಲಾಗಿದೆ. ರಾಜ್ಯದಲ್ಲಿ ಈಗಾಗಲೇ ಗರಿಷ್ಠ ತಾಪಮಾನ 37 ಡಿ.ಸೆ. ಗಡಿಯನ್ನು ದಾಟಿದೆ. ಬೆಂಗಳೂರು ಸೇರಿದಂತೆ ಹಲವೆಡೆ ದಾಖಲೆ ಪ್ರಮಾಣದ ಉಷ್ಣಾಂಶ ಕಂಡುಬರುತ್ತಿದೆ.
ಒಂದು ವಾರದ ನಂತರ ರಾಜ್ಯದ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ. ಆದರೆ ಮೇ 4 ರವರೆಗೂ ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿಲ್ಲ. ಬೀದರ್ 40, ವಿಜಯಪುರ 41.8, ಬಾಗಲಕೋಟೆ 42.4, ಧಾರವಾಡ 40.2, ಗದಗ 41.2, ಕಲಬುರಗಿ 43.6, ಹಾವೇರಿ 37.4, ಕೊಪ್ಪಳ 42.7, ರಾಯಚೂರು 43.4, ಬೆಂಗಳೂರು ನಗರ 38.2, ಚಾಮರಾಜನಗರ 39, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 39, ಚಿತ್ರದುರ್ಗ 39.9, ದಾವಣಗೆರೆ 40, ಚಿಕ್ಕಬಳ್ಳಾಪುರ 31.1, ಮಂಡ್ಯ 39.6, ಶಿವಮೊಗ್ಗ 38.6 ಡಿ.ಸೆಂ. ನಷ್ಟು ಗರಿಷ್ಠ ತಾಪಮಾನ ದಾಖಲಾಗುತ್ತಿದೆ.
ಸರಾಸರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 35 ಡಿ.ಸೆಂ.ಗಿಂತ ಹೆಚ್ಚು ತಾಪಮಾನ ಕಂಡುಬರುತ್ತಿದೆ. ಕಲಬುರಗಿಯಲ್ಲಿ ಅತೀ ಹೆಚ್ಚು 43.6 ಹಾಗೂ ರಾಯಚೂರಿನಲ್ಲಿ 43.4 ಡಿ.ಸೆ.ನಷ್ಟು ಗರಿಷ್ಠ ತಾಪಮಾನ ದಾಖಲಾಗಿದ್ದು, ಸರಾಸರಿ 2 ರಿಂದ 3 ಡಿ.ಸೆ. ನಷ್ಟು ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದು ಕಂಡುಬರುತ್ತಿದೆ.ಹೀಗಾಗಿ ಬಿಸಿಲಿನ ತೀವ್ರತೆಗೆ ಜನ, ಜಾನುವಾರು, ಪ್ರಾಣಿ-ಪಕ್ಷಿಗಳು ತತ್ತರಿಸಿ ಹೋಗುವಂತಾಗಿದೆ.