ಬೆಂಗಳೂರು,ಡಿ.24- ಮಗಳನ್ನು ಮದುವೆ ಮಾಡಿಕೊಡದಿದ್ದಕ್ಕೆ ಕೋಪಗೊಂಡು ಆಕೆಯ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಆರೋಪಿಗಾಗಿ ಬಸವೇಶ್ವರ ನಗರ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಟೀ ಅಂಗಡಿ ಇಟ್ಟುಕೊಂಡಿದ್ದ ಮುತ್ತು ಪರಾರಿಯಾಗಿರುವ ಆರೋಪಿ.
ಬೋವಿ ಕಾಲೋನಿಯಲ್ಲಿ ವಾಸವಿರುವ ಗೀತಾ (41) ಅವರು ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದು, ಅವರ 19 ವರ್ಷದ ಮಗಳು ವಿದ್ಯಾಭ್ಯಾಸ ಮಾಡಿ ಮನೆಯಲ್ಲಿದ್ದಾರೆ. ಇವರ ಜತೆ ಮುತ್ತು ಸಹ ನೆಲೆಸಿದ್ದ.
ತಮಿಳುನಾಡು ಮೂಲದವರಾದ ಇವರು ಇತ್ತೀಚೆಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆ ವೇಳೆ ಮಗಳನ್ನು ಮದುವೆ ಮಾಡಿಕೊಡುವಂತೆ ಮುತ್ತು ಒತ್ತಾಯಿಸಿದ್ದಾನೆ. ಅದಕ್ಕೆ ಗೀತಾ ಒಪ್ಪಿಲ್ಲ. ಇದೇ ಕೋಪಕ್ಕೆ ಮೊನ್ನೆ ರಾತ್ರಿ ಗೀತಾ ಅವರು ಮಲಗಿದ್ದಾಗ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ತಾಯಿಯ ಕಿರುಚಾಟ ಕೇಳಿ ಪಕ್ಕದ ಕೋಣೆಯಲ್ಲಿ ಮಲಗಿದ್ದ ಮಗಳು ಎದ್ದು ಬಂದು ನೋಡಿದಾಗ ಬೆಂಕಿ ಹೊತ್ತಿಕೊಂಡಿರುವುದು ಕಂಡು ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ.ತಕ್ಷಣ ನೆರೆಹೊರೆಯವರು ಬಂದು ಬೆಂಕಿಯನ್ನು ನಂದಿಸಿ ಗೀತಾ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬಸವೇಶ್ವರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
