ನವದೆಹಲಿ,ಮೇ2- ಕೋವಿಡ್ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ನರೇಂದ್ರಮೋದಿಯವರ ಫೋಟೊವನ್ನು ತೆಗೆದು ಹಾಕಲಾಗಿದ್ದು, ಹಲವು ಅನುಮಾನಗಳು ಮೂಡಿವೆ. ಈ ಹಿಂದೆ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿಯವರ ಫೋಟೊ ಹಾಕಲಾಗಿತ್ತು. ಭಾರತವು ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸುತ್ತದೆ ಎಂದು ಬರೆಯಲಾಗಿತ್ತು. ಆದರೆ ಈಗ ಪ್ರಧಾನಿ ಮೋದಿ ಹೆಸರನ್ನು ಕೈಬಿಡಲಾಗಿದೆ.
ಇದೀಗ ಕೊರೊನಾ ಲಸಿಕೆ ತಯಾರಕ ಬ್ರಿಟಿಷ್ ಕಂಪನಿ ಅಸ್ಟ್ರಾಜೆನೆಕಾ ವಿರುದ್ಧ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ, ಈ ಲಸಿಕೆಯು ರಕ್ತಹೆಪ್ಪುಗಟ್ಟುವಿಕೆಯಂತಹ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದ್ದು, ಕೆಲವೊಂದು ವಿಚಾರಗಳನ್ನು ಸಂಸ್ಥೆ ಕೂಡ ಒಪ್ಪಿಕೊಂಡಿದೆ. ಆದರೆ ಲಕ್ಷದಲ್ಲಿ ಒಂದು ಅಥವಾ ಎರಡು ಮಂದಿಗೆ ಮಾತ್ರ ಈ ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಸಂಸ್ಥೆ ಹೇಳಿದೆ. ಅಸ್ಟ್ರಾಜೆನೆಕಾ ಸಂಸ್ಥೆ ವಿರುದ್ಧ ಹಲವು ಮಂದಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿನ ಕೆಲವು ಬಳಕೆದಾರರು ಗಮನಾರ್ಹ ಬದಲಾವಣೆಯನ್ನು ಗಮನಿಸಿದ್ದಾರೆ.
ಬಿಸಿಲ ಬೇಗೆ : ಏಸಿ-ಏರ್ಕೂಲರ್ಗಳ ಖರೀದಿಗೆ ಮುಗಿಬಿದ್ದಿ ಜನ
ಭಾರತದಲ್ಲಿ ನೀಡಲಾದ ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಫೋಟೋ ಇಲ್ಲದಿರುವುದು ತಿಳಿದುಬಂದಿದೆ. ಜತೆಗೆ ಫೋಟೊ ಬದಲಿಗೆ ಕ್ಯೂ ಆರ್ ಕೋಡ್ ಮಾತ್ರವೇ ಇದೆ.
ಆರೋಗ್ಯ ಇಲಾಖೆ ಹೇಳುವುದೇನು? :
ಆದಾಗ್ಯೂ , ಲೋಕಸಭೆ ಚುನಾವಣೆಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ ಕಾರಣ ಲಸಿಕೆ ಪ್ರಮಾಣಪತ್ರದಿಂದ ಚಿತ್ರವನ್ನು ತೆಗೆದುಹಾಕಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರದಿಂದ ಮೋದಿ ಅವರ ಫೋಟೋವನ್ನು ತೆಗೆದುಹಾಕಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ.
2022ರಲ್ಲಿ, ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ರಾಜ್ಯಗಳಲ್ಲಿ ನೀಡಲಾದ ಲಸಿಕೆ ಪ್ರಮಾಣಪತ್ರದಿಂದ ಮೋದಿಯವರ ಭಾವಚಿತ್ರವನ್ನು ತೆಗೆದುಹಾಕಲಾಯಿತು. ಆ ರಾಜ್ಯಗಳ ವಿಧಾನಸಭಾ ಚುನಾವಣೆಯ ತಯಾರಿಗಾಗಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಈ ಕ್ರಮವನ್ನು ಕಡ್ಡಾಯಗೊಳಿಸಿದೆ.