ನವದೆಹಲಿ, ಮೇ 2- ವೈದ್ಯಕೀಯ ಕೋರ್ಸ್‍ಗಳ ಸೀಟಿಗಾಗಿ ನಡೆಯಲಿರುವ ನೀಟ್ ಪರೀಕ್ಷೆಗೆ ಈಗಾಗಲೇ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಪಡೆಯಲು ಇಂದು ಅಂತರ್ಜಾಲದಲ್ಲಿ ಅವಕಾಶ ನೀಡಿದ್ದು, ಮೇ 5ರಂದು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆವರೆಗೆ ಒಂದೇ ಹಂತದಲ್ಲಿ ದೇಶಾದ್ಯಂತ ಪರೀಕ್ಷೆ ನಡೆಯಲಿದೆ.
ಪ್ರಸ್ತುತ ಅಂದಾಜಿನ ಪ್ರಕಾರ, ಸುಮಾರು 23,81,833 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಭಾರತದಾದ್ಯಂತ 571 ನಗರಗಳಲ್ಲಿ ಮತ್ತು ದೇಶದ ಹೊರಗಿನ 14 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಒಡಿಯಾ, ಕನ್ನಡ, ಪಂಜಾಬಿ, ಉರ್ದು, ಮಲಯಾಳಂ, ತೆಲುಗು, ತಮಿಳು ಭಾಷೆ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರಶ್ನೆಪತ್ರಿಕೆ ಇರಲಿದೆ.
ಈಗಾಗಲೇ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರ ಪಡೆಯಲು ಅಂತರ್ಜಾಲದಲ್ಲಿ ಒಮ್ಮೆಲೆ ಮುಗಿಬಿದ್ದಿರುವುದರಿಂದ ಸರ್ವರ್ ಕೂಡ ನಿಧಾನಗೊಂಡಿದೆ. ಆದರೂ ಇಂದು ರಾತ್ರಿವರೆಗೂ ಅವಕಾಶ ಕೊಟ್ಟಿರುವುದರಿಂದ ಬಹುತೇಕ ಎಲ್ಲರೂ ಪ್ರವೇಶಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳುವುದು ಅಗತ್ಯವಾಗಿದೆ.
ಅಂತರ್ಜಾಲದ ಮೂಲಕ ಪ್ರಶ್ನೆಪತ್ರಿಕೆ ಡೌನ್‍ಲೋಡ್ ಆಗಲಿದ್ದು, ಯಾವುದೇ ಅಕ್ರಮ ನಡೆಯದಂತೆ ಪಾರದರ್ಶಕ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅತಿ ದೊಡ್ಡ ಪರೀಕ್ಷೆಯನ್ನು ನಡೆಸುತ್ತಿದೆ.
ವೈದ್ಯರಾಗುವ ಕನಸು ಹೊತ್ತು ಲಕ್ಷಾಂತರ ವಿದ್ಯಾರ್ಥಿಗಳು ಈಗ ನೀಟ್ ಪರೀಕ್ಷೆ ಬರೆಯುತ್ತಿದ್ದಾರೆ. ಅದರಲ್ಲಿ ಈಗ ದೇಶಾದ್ಯಂತ ಕೇವಲ 2 ರಿಂದ 3 ಲಕ್ಷ ಸೀಟ್‍ಗಳು ಮಾತ್ರ ಲಭ್ಯವಿವೆ. ವರ್ಷದಿಂದ ವರ್ಷಕ್ಕೆ ವೈದ್ಯಕೀಯ ಸೀಟುಗಳು ಹೆಚ್ಚಾಗುತ್ತಿವೆ. ಅದರ ಜತೆಗೆ ಆಕಾಂಕ್ಷಿಗಳ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ.