ಬೆಂಗಳೂರು,ಅ.12- ರಾಜ್ಯದಲ್ಲಿ ಒಂದು ಕೋಟಿ ಜನ ಬಡತನ ರೇಖೆಗಿಂತ ಮೇಲ್ಮಟ್ಟಕ್ಕೆ ಪರಿವರ್ತನೆಯಾಗಿದ್ದು, ಇದು ವಿಶ್ವದಲ್ಲೇ ಹಿಂದೆಂದೂ ಇಲ್ಲದಂತಹ ಐತಿಹಾಸಿಕ ದಾಖಲೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪಂಚಖಾತ್ರಿಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿರುವುದರಿಂದ ಶೇ.90ರಷ್ಟು ಜನರಿಗೆ ಸೌಲಭ್ಯಗಳು ತಲುಪಿವೆ. ಒಂದು ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದು ಮಧ್ಯಮ ವರ್ಗದ ಪಟ್ಟಿಗೆ ಸೇರುತ್ತಿವೆ. ಇದು ರಾಜ್ಯ, ದೇಶದಲ್ಲಷ್ಟೆ ಅಲ್ಲ ವಿಶ್ವದಲ್ಲೇ ಐತಿಹಾಸಿಕ ದಾಖಲೆಯಾಗಿದೆ. ರಾಜ್ಯ ಸರ್ಕಾರದ ಒಂದು ನಿರ್ಣಯದಿಂದ ಮಹತ್ವದ ಬದಲಾವಣೆಯಾಗಲಿದೆ ಎಂದರು.
ಮಾಜಿ ಶಾಸಕ ರಾಮಪ್ಪ ಲಮಾಣಿ ಕಾಂಗ್ರೆಸ್ ಸೇರ್ಪಡೆ
ಕಾಂಗ್ರೆಸ್‍ನ ಈ ಯಶಸ್ಸನ್ನು ಸಹಿಸಿಕೊಳ್ಳಲಾಗದೆ ವಿರೋಧ ಪಕ್ಷಗಳು ಅಪಪ್ರಚಾರದಲ್ಲಿ ತೊಡಗಿವೆ. ಸರ್ಕಾರ ಆರು ತಿಂಗಳಿನಲ್ಲೇ ಬಿದ್ದು ಹೋಗಲಿದೆ ಎಂದು ಹತಾಶ ಹೇಳಿಕೆ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ.
ಜನಾಭಿಪ್ರಾಯಕ್ಕೆ ಬೆಲೆ ಕೊಟ್ಟು ಬಹಳಷ್ಟು ಅನ್ಯಪಕ್ಷಗಳ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಹೊಸಬರ ಸೇರ್ಪಡೆಗೆ ಕಾಂಗ್ರೆಸ್‍ನಲ್ಲಿ ಒಮ್ಮತದ ಬೆಂಬಲ ವ್ಯಕ್ತವಾಗಿದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾಲ ಸನ್ನಿತವಾಗುತ್ತಿದೆ. ಕಾಂಗ್ರೆಸ್‍ನ ಯಶಸ್ಸು ಏರುತ್ತಿದೆ ಎಂದರು.