ಆಯೋಧ್ಯೆ,ಮೇ5- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಇಂದು ಸಂಜೆ ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮಲಲ್ಲಾನ ದರ್ಶನ ಪಡೆದು ಬಳಿಕ ರೋಡ್ ಶೋ ನಡೆಸಲಿದ್ದಾರೆ.
ಅಯೋಧ್ಯೆಯಲ್ಲಿ 2 ಕಿಲೋಮೀಟರ್ ರೋಡ್ ಶೋ ನಡೆಯಲಿದ್ದು, ಪ್ರಧಾನಿಯವರ ಅಯೋಧ್ಯೆ ಭೇಟಿಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದ ನಿರ್ಗಮನ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಮೂರನೇ ಹಂತದ ಲೋಕಸಭೆ ಚುನಾವಣೆಗೆ ಮುನ್ನ ಇಟಾವಾ ಮತ್ತು ಧೌರಾಹರಾದಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಇದಾದ ಬಳಿಕ ಮೋದಿ ಅವರು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿದ್ದು, ಮೊದಲು ಅಲ್ಲಿ ಮೆಗಾ ರೋಡ್ ಶೋ ನಡೆಸಲಿದ್ದಾರೆ.
ಮಧ್ಯಾಹ್ನ 2.45 ರ ಸುಮಾರಿಗೆ ಇಟಾವಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಅನಂತರ ಅವರು ಧೌರಾಹರಾಗೆ ತೆರಳುತ್ತಾರೆ, ಅಲ್ಲಿ ಅವರು ಸಂಜೆ 4.45ರ ಸುಮಾರಿಗೆ ಮತ್ತೊಂದು ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಂಜೆ 7 ಗಂಟೆಗೆ, ಪ್ರಧಾನಿ ಅವರು ಈ ವರ್ಷದ ಜನವರಿಯಲ್ಲಿ ಉದ್ಘಾಟಿಸಿದ ಅಯೋಧ್ಯೆಯ ರಾಮ ಮಂದಿರದಲ್ಲಿ ಪೂಜೆ ಮತ್ತು ದರ್ಶನ ಪಡೆಯಲಿದ್ದಾರೆ. ರಾತ್ರಿ 7:15 ರ ಸುಮಾರಿಗೆ, ಮೋದಿ ನಗರದಲ್ಲಿ ಮೆಗಾ ರೋಡ್‌ಶೋ ನಡೆಸಲಿದ್ದಾರೆ, ಇದು ಭಾರೀ ಜನಸಮೂಹವನ್ನು ಸೆಳೆಯುವ ನಿರೀಕ್ಷೆಯಿದೆ.
ಸಂಭಾಲ್, ಹತ್ರಾಸ್, ಆಗ್ರಾ, ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನ್‌ಪುರಿ, ಎತಾಹ್, ಬದೌನ್, ಬರೇಲಿ ಮತ್ತು ಅಒನ್ಲಾ ಸೇರಿದಂತೆ ಹತ್ತು ಕ್ಷೇತ್ರಗಳಿಗೆ ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಮುಂಚಿತವಾಗಿ ಮೋದಿ ಭೇಟಿ ನೀಡಲಿದ್ದಾರೆ.