ಬೆಂಗಳೂರು, ಡಿ.25- ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ-ಎಫ್ ಸಿ ಮಾಡದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಖಾಸಗಿ ಬಸ್ ದುರಂತಕ್ಕೆ ಅವರು ತೀವ್ರ ವಿಷಾದ ವ್ಯಕ್ತಪಡಿಸಿದರು.ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಗೆ ಹಿರಿಯೂರು ಬಳಿಯ ಹೆದ್ದಾರಿಯಲ್ಲಿ ಲಾರಿಯೊಂದು ಎತ್ತರದ ತಡೆಯನ್ನು ದಾಟಿ ಡಿಕ್ಕಿ ಹೊಡೆದಿದೆ. ಇದರಿಂದ ಸುಮಾರು ಐದು ಜನ ಮೃತಪಟ್ಟಿರುವ ಮಾಹಿತಿ ಇದೆ ಎಂದರು.
ಬಸ್‌ನ ಡೀಸೆಲ್ ಟ್ಯಾಂಕಿಗೆ ಘರ್ಷಣೆಯಾಗಿರುವುದರಿಂದ ಬೆಂಕಿ ಹೊತ್ತಿಕೊಂಡಿದೆ. ಅಪಘಾತಕ್ಕೆ ಬಹುಶಃ ಅಜಾಗರೂಕತೆಯ ಚಾಲನೆ ಅಥವಾ ನಿದ್ದೆಯ ಮಂಪರು ಕಾರಣ ಇರಬಹುದು. ಸಾರಿಗೆ ಇಲಾಖೆಯ ಯೋಗೇಶ್ ಮತ್ತು ಹೆಚ್ಚುವರಿ ಆಯುಕ್ತ ಓಂಕಾರೇಶ್ವರ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ನಿಖರ ಕಾರಣವನ್ನು ಪತ್ತೆ ಹಚ್ಚಲಿದ್ದಾರೆ ಎಂದರು.
ಆಂಧ್ರಪ್ರದೇಶದಲ್ಲಿ ಬಸ್ ದುರಂತ ಸಂಭವಿಸಿದ ಬಳಿಕ ಸಾರಿಗೆ ಬಸ್‌ಗಳಲ್ಲಿ ಯಾವುದೇ ರೀತಿಯ ಸ್ಫೋಟಕಗಳನ್ನು ಸಾಗಿಸಬಾರದು ಎಂದು ಕಟ್ಟಪ್ಪಣೆ ಮಾಡಿದ್ದೇವೆ. ಪ್ರಯಾಣಿಕರನ್ನು ಹೊರತು ಪಡಿಸಿ ಅನಗತ್ಯವಾದ ಲಗೇಜ್‌ಗಳನ್ನು ಸಾಗಿಸದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
2013ರಲ್ಲಿ ತಾವು ಸಾರಿಗೆ ಇಲಾಖೆಯ ಸಚಿವರಾಗಿದ್ದಾಗ ಜಪಾನ್ ಟ್ರಾವೆಲ್‌್ಸನ ಬಸ್ಸೊಂದು ಹೈದರಾಬಾದ್ ಗೆ ಹೋಗುವಾಗ ಬೆಂಕಿ ಹೊತ್ತಿಕೊಂಡು ನಾಲ್ಕೈದು ಮಂದಿ ಸಾವನ್ನಪ್ಪಿದ್ದರು. ಆಗ ತಾವು ಗಮನಿಸಿದಂತೆ ಆ ಬಸ್ ನಲ್ಲಿ ತುರ್ತು ನಿರ್ಗಮನದ ಬಾಗಿಲು ಇರಲಿಲ್ಲ. ಅಪಘಾತದ ಸಂದರ್ಭದಲ್ಲಿ ಗ್ಲಾಸ್ ಒಡೆದು ಆಚೆ ಬರಬೇಕಿತ್ತು. ಐಶಾರಾಮಿ ಬಸ್‌ಗಳು 8 ರಿಂದ 10 ಅಡಿ ಎತ್ತರ ಇರುತ್ತವೆ. ಮಕ್ಕಳು, ವಯಸ್ಸಾದವರು, ಹೆಣ್ಣು ಮಕ್ಕಳು ಅಷ್ಟು ಎತ್ತರದಿಂದ ಜಿಗಿಯಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಸಾರಿಗೆ ಇಲಾಖೆಯ 25 ಸಾವಿರ ಬಸ್‌ಗಳಿಗೆ, ಎಲ್ಲಾ ಖಾಸಗಿ ವಾಹನಗಳಿಗೆ, ಓಮ್ನಿ ಬಸ್‌ಗಳಿಗೆ, ಶಾಲಾ ವಾಹನಗಳಿಗೆ ಕಡ್ಡಾಯವಾಗಿ ತುರ್ತು ನಿರ್ಗಮನದ ಬಾಗಿಲನ್ನು ಅಳವಡಿಸಲಾಗಿದೆ ಎಂದರು.
ತಾವು ಇಲಾಖೆಯನ್ನು ಬಿಟ್ಟು ಏಳೆಂಟು ವರ್ಷಗಳಾಗಿದ್ದವು. ಹೊಸದಾಗಿ ಬೇರೆ ವಾಹನಗಳನ್ನು ಖರೀದಿಸಿದರೆ ಅದರಲ್ಲಿ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಎಫ್ ಸಿ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಪರಿಹಾರ ನೀಡಲು ಚರ್ಚೆ:
ಆಂಧ್ರ ಪ್ರದೇಶದಲ್ಲಿನ ಬಸ್ ದುರಂತಕ್ಕೂ ಚಿತ್ರದುರ್ಗದ ಘಟನೆಗೂ ವ್ಯತ್ಯಾಸಗಳಿವೆ. ಇಲ್ಲಿ ಎದುರಿನಿಂದ ಲಾರಿ ಬಂದು ಬಸ್ ಗೆ ಡಿಕ್ಕಿ ಹೊಡೆದಿದೆ ಎಂದರು.ಅಪಘಾತದ ಸ್ಥಳದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ, ಮೃತಪಟ್ಟವರ ಶವ ಪರೀಕ್ಷೆ, ಉಳಿದವರನ್ನು ಊರಿಗೆ ಕಳುಹಿಸುವ ಜವಾಬ್ದಾರಿಗಳನ್ನು ಜಿಲ್ಲಾಡಳಿತ ನಿರ್ವಹಣೆ ಮಾಡುತ್ತಿದೆ ಎಂದರು.
ಗಾಯಾಳುಗಳಿಗೆ ಮತ್ತು ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಅವರು ಕ್ರಮ ಕೈಗೊಳ್ಳುತ್ತಾರೆ. ತಾವು ಕೂಡ ಮುಖ್ಯಮಂತ್ರಿ ಅವರ ಕಚೇರಿಗೆ ಕರೆ ಮಾಡಿ ಚರ್ಚೆ ಮಾಡಿದ್ದು ಈಗಾಗಲೇ ಸಂದೇಶ ರವಾನಿಸಲಾಗಿದೆ ಎಂದು ನನಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
