Friday, November 22, 2024
Homeರಾಜ್ಯರಾಜ್ಯದಲ್ಲಿ 2ನೇ ಹಂತದ ಮತದಾನ ಬಿರುಸಿನಿಂದ ಆರಂಭ

ರಾಜ್ಯದಲ್ಲಿ 2ನೇ ಹಂತದ ಮತದಾನ ಬಿರುಸಿನಿಂದ ಆರಂಭ

ಬೆಂಗಳೂರು,ಮೇ7- ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ಬಿರುಸಿನಿಂದ ಆರಂಭಗೊಂಡು ಬಹುತೇಕ ಶಾಂತಿಯುತವಾಗಿ ನಡೆಯಿತು. ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿತು. ಹಲವು ಮತಗಟ್ಟೆಗಳಲ್ಲಿ ಸಾಲುಗಟ್ಟಿ ಮತ ಚಲಾಯಿಸುತ್ತಿದ್ದ ದೃಶ್ಯ ಕಂಡುಬಂದಿತು.

ಯುವ ಮತದಾರರು ಉತ್ಸಾಹದಿಂದ ಮತದಾನ ಮಾಡುತ್ತಿರುವುದು ಅಲ್ಲಲ್ಲಿ ಕಂಡುಬಂದಿತು. ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಈತನಕ ಶಾಂತಿಯುತವಾಗಿ ಮತದಾನ ನಡೆದಿದೆ. ಗ್ರಾಮೀಣ ಭಾಗದಲ್ಲಿ ಬಿರುಸಿನ ಮತದಾನವಾಗುತ್ತಿರುವುದು ಕಂಡುಬಂದಿತು. ನಗರ ಪ್ರದೇಶಗಳಲ್ಲಿ ಅಷ್ಟು ಉತ್ಸಾಹ ಕಂಡುಬರಲಿಲ್ಲ.

ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಬೇಕಾದವರು ಬೆಳಗ್ಗೆಯೇ ಮತ ಚಲಾಯಿಸಿ ತಮ್ಮ ಕೆಲಸ ಕಾರ್ಯಗಳಿಗೆ ತೆರಳಿದರು. 21 ಮಹಿಳೆಯರು ಸೇರಿದಂತೆ ಒಟ್ಟು 227 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ. ಇಬ್ಬರು ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ನಾಲ್ವರು ಸಚಿವರ ಮಕ್ಕಳು, ಓರ್ವ ಸಚಿವರ ಸಹೋದರಿ, ಸಚಿವರೊಬ್ಬರ ಪತ್ನಿ, ಹಾಲಿ ಸಂಸದರ ಪತ್ನಿ ಹಾಗೂ ರಾಷ್ಟ್ರೀಯ ಪಕ್ಷವೊಂದರ ರಾಷ್ಟ್ರೀಯ ಅಧ್ಯಕ್ಷರ ಅಳಿಯ ಚುನಾವಣಾ ಕಣದಲ್ಲಿ ಇದ್ದಾರೆ.

ಬೆಳಗ್ಗೆ 11 ಗಂಟೆ ವೇಳೆಗೆ ರಾಯಚೂರಿನಲ್ಲಿ ಅತಿ ಕಡಿಮೆ ಶೇ.15.27ರಷ್ಟು ಮತದಾನವಾಗಿದ್ದರೆ ಶಿವಮೊಗ್ಗದಲ್ಲಿ ಶೇ.20.39ರಷ್ಟು ಬಿರುಸಿನ ಮತದಾನವಾಗಿತ್ತು.ಚಿಕ್ಕೋಡಿ ಶೇ.20.81, ಬೆಳಗಾವಿ ಶೇ.18.48, ಬಾಗಲಕೋಟೆ ಶೇ.16.59, ಬಿಜಾಪುರ ಶೇ.18.26, ಗುಲ್ಬರ್ಗ ಶೇ.16.71, ರಾಯಚೂರು ಶೇ.16.27, ಬೀದರ್‌ ಶೇ.16.90, ಕೊಪ್ಪಳ ಶೇ.16.79, ಬಳ್ಳಾರಿ ಶೇ. 20.37, ಹಾವೇರಿ ಶೇ.16.62, ಧಾರವಾಡ ಶೇ.18.38, ಉತ್ತರಕನ್ನಡ ಶೇ.22.07, ದಾವಣಗೆರೆ ಶೇ.18.11, ಶಿವಮೊಗ್ಗ ಶೇ.22.39ರಷ್ಟು ಮತದಾನವಾಗಿತ್ತು.

ಬೆಳಗ್ಗೆ ಬಿರುಸಿನಿಂದ ಆರಂಭಗೊಂಡ ಮತದಾನವು ಮಧ್ಯಾಹ್ನವಾಗುತ್ತಿದ್ದಂತೆ ಕಡಿಮೆಯಾಯಿತು. ಬೇಸಿಗೆಯ ಬಿರುಬಿಸಿಲಿನಿಂದಾಗಿ ಮಧ್ಯಾಹ್ನದ ವೇಳೆ ಮತದಾನ ಮಾಡಲು ಅಷ್ಟಾಗಿ ಆಸಕ್ತಿ ತೋರದಿರುವುದು ಕಂಡುಬಂತು. ಸಂಜೆಯಾಗುತ್ತಿದ್ದಂತೆ ಮತ್ತೆ ಮತದಾನ ಬಿರುಸಾಗತೊಡಗಿತು.

ಬಿಸಿಲು ಹೆಚ್ಚಾಗಿರುವುದರಿಂದ ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. 14 ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ಇದರಲ್ಲಿ 1,29,48,978 ಪುರುಷರು, 1,29,66,570 ಮಹಿಳೆಯರು, 1945 ತೃತೀಯ ಲಿಂಗಿಗಳಿದ್ದಾರೆ. 6,90,929 ಯುವ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು.

14 ಕ್ಷೇತ್ರಗಳಲ್ಲಿ ಒಟ್ಟು 28,269 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಅನುಕೂಲವಾಗುವಂತೆ ಸೂಕ್ತ ಪೊಲೀಸ್‌ ಬಂದೋಬಸ್‌್ತ ವ್ಯವಸ್ಥೆ ಮಾಡಲಾಗಿತ್ತು. 1.45 ಲಕ್ಷ ಮತಗಟ್ಟೆ ಅಧಿ ಕಾರಿಗಳು, 35,000 ಪೊಲೀಸರು, ಅರೆಸೇನಾ ಪಡೆಯ 65 ಕಂಪನಿಗಳನ್ನು ನಿಯೋಜಿಸಲಾಗಿತ್ತು. ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಎಡಗೈ ತೋರುಬೆರಳಿಗೆ ಶಾಯಿಯನ್ನು ಹಾಕಲಾಗುತ್ತಿತ್ತು.

RELATED ARTICLES

Latest News