ಬೆಳಗಾವಿ,ಮೇ7- ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದೆ ಮುಂದೊಂದು ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಸಿ.ಡಿಗಳು ಆಚೆ ಬಂದರೂ ಅಚ್ಚರಿ ಇಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ತಮ್ಮ ತವರು ಕ್ಷೇತ್ರ ಗೋಕಾಕ್‌ನಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನಾನು ಸದ್ಯದಲ್ಲೇ ಸಿ.ಡಿ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದೆ. ಮಹಾನಾಯಕನೊಬ್ಬ ಪ್ರತಿಷ್ಠಿತ ಕುಟುಂಬಕ್ಕೆ ಖೆಡ್ಡಾ ತೋಡುತ್ತಿದ್ದಾನೆ ಎಂದಾಗ ನನ್ನ ಮಾತು ನಂಬಿರಲಿಲ್ಲ. ಈಗ ಏನಾಗಿದೆ ಎಂದು ಪ್ರಶ್ನಿಸಿದರು.
ರಾಜಕಾರಣದಲ್ಲಿ ಈಗ ಸೈದ್ಧಾಂತಿಕ ಹೋರಾಟ ಮುಗಿದು ಹೋಗಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರು ತುಳಿಯುವವರೇ ಜಾಸ್ತಿಯಾಗಿದೆ. ಸಿ.ಡಿ, ಪೆನ್‌ಡ್ರೈವ್ ಪ್ರಕರಣಗಳು ಯಾವುದು ಒಳ್ಳೆಯದಲ್ಲ. ಇದನ್ನು ಪಕ್ಷಾತೀತವಾಗಿ ಇಲ್ಲಿಗೆ ಮುಗಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ಅವರ ಸಿ.ಡಿಗಳು ಆಚೆ ಬಂದರೂ ಅಚ್ಚರಿಪಡುವಂಥದ್ದು ಏನೂ ಇಲ್ಲ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಆಚೆ ಬಂದಿದ್ದರ ಹಿಂದೆ ನಾನು ಮೊದಲ ದಿನವೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಹೇಳಿದ್ದೆ. ನನ್ನ ಮಾತನ್ನು ಯಾರೂ ಕೂಡ ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ವಕೀಲ ದೇವರಾಜೇಗೌಡ ಬಿಡುಗಡೆ ಮಾಡಿರುವ ಆಡಿಯೋ ಏನು ಹೇಳುತ್ತದೆ ಎಂದು ಪ್ರಶ್ನೆ ಮಾಡಿದರು.
ಈಗಲೂ ನಾನು ಸ್ಪಷ್ಟವಾಗಿ ಹೇಳುತ್ತೇನೆ. ಇದರ ಸೂತ್ರಧಾರ ಡಿ.ಕೆ.ಶಿವಕುಮಾರ್ ಎಂಬುದರಲ್ಲಿ ಎರಡು ಮಾತಿಲ್ಲ. ತನಗೆ ಆಗದವರನ್ನು ಈ ರೀತಿ ಬಳಸಿಕೊಂಡು ಚಾರಿತ್ರ್ಯಹರಣ ಮಾಡುವುದು ಅವರಿಗೆ ಮೊದಲಿನಿಂದಲೂ ಅಭ್ಯಾಸವಿದೆ ಎಂದು ವಾಗ್ದಾಳಿ ನಡೆಸಿದರು.
ನನ್ನ ಪ್ರಕರಣದಲ್ಲೂ ಡಿ.ಕೆ.ಶಿವಕುಮಾರ್ ನೇರ ಶಾಮೀಲಾಗಿದ್ದವರು. ಅದಕ್ಕೆ ನಮ್ಮವರು ಕೂಡ ಕೈಜೋಡಿಸಿದ್ದಾರೆ. ಜೂ.4ರ ನಂತರ ನಾನು ಕೆಲವು ವಿಷಯಗಳನ್ನು ಬಹಿರಂಗಪಡಿಸುತ್ತೇನೆ. ಅಲ್ಲಿಯವರೆಗೂ ಕಾದು ನೋಡಿ ರಮೇಶ್ ಜಾರಕಿಹೊಳಿ ಕುತೂಹಲ ಹುಟ್ಟಿಸಿದರು.
ನಾನು ಸುಖಾಸುಮ್ಮನೆ ಯಾರ ಬಗ್ಗೆಯೂ ಆಧಾರರಹಿತ ಆರೋಪ ಮಾಡುವುದಿಲ್ಲ. ರಾಜಕಾರಣದಲ್ಲಿ ಜನರ ಬಳಿ ಹೋಗಿ ಹೋರಾಟ ನಡೆಸಿ ಜನನಾಯಕನಾಗಬೇಕು. ಅದನ್ನು ಬಿಟ್ಟು ಪೆನ್ ಡ್ರೈವ್, ಸಿ.ಡಿ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುವುದರಿಂದ ನಾಯಕನಾಗುವುದಿಲ್ಲ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.