Thursday, December 25, 2025
Homeಬೆಂಗಳೂರುಬೆಂಗಳೂರು : ಕುಡಿದು ಕಿರಿಕ್ ಮಾಡುತ್ತಿದ್ದ ಪತಿಯನ್ನು ಇರಿದು ಕೊಂದ ಪತ್ನಿ

ಬೆಂಗಳೂರು : ಕುಡಿದು ಕಿರಿಕ್ ಮಾಡುತ್ತಿದ್ದ ಪತಿಯನ್ನು ಇರಿದು ಕೊಂದ ಪತ್ನಿ

Bengaluru: Wife stabs husband to death after he was drunk and quarreling

ಬೆಂಗಳೂರು,ಡಿ.25- ಕೆಲಸಕ್ಕೆ ಹೋಗದೆ ಕುಡಿದು ಬಂದು ವಿನಾಕಾರಣ ಜಗಳವಾಡುತ್ತಿದ್ದ ಪತಿಯನ್ನು ಪತ್ನಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರ್ತೂರು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಅಸ್ಸಾಂ ಮೂಲದ ರಾಜೀವ್‌ ರಜಪೂತ್‌ (28) ಕೊಲೆಯಾದ ವ್ಯಕ್ತಿ.

ಎಂಟು ವರ್ಷದ ಹಿಂದೆ ರುಬಿನಾ ಕೌರ್‌ ಎಂಬುವವರನ್ನು ರಾಜೀವ್‌ ರಜಪೂತ್‌ ಮದುವೆಯಾಗಿದ್ದು, ದಂಪತಿಗೆ ಒಂದು ಮಗುವಿದೆ.ಈ ಕುಟುಂಬ ವರ್ತೂರಿನ ಮುನೇಕೊಳಲು ಶಿರಡಿ ಸಾಯಿಬಾಬಾ ದೇವಸ್ಥಾನದ ಬಳಿ ವಾಸವಾಗಿದೆ.ರಾಜೀವ್‌ ರಜಪೂತ್‌ ಕೆಲಸಕ್ಕೆ ಹೋಗದೆ ಅಲ್ಲಿಲ್ಲಿ ತಿರುಗಾಡಿಕೊಂಡು ಮದ್ಯ ಸೇವಿಸಿ ಮನೆಗೆ ಬಂದು ವಿನಾಕಾರಣ ಪತ್ನಿ ರುಬಿನಾ ಜೊತೆ ಪ್ರತಿದಿನ ಜಗಳವಾಡುತ್ತಿದ್ದನು.

ಕುಟುಂಬ ನಿರ್ವಹಣೆಗಾಗಿ ತಾನು ಕೆಲಸಕ್ಕೆ ಹೋಗುವುದಾಗಿ ರುಬಿನಾ ಕೇಳಿದರೂ ಪತಿ ಕೆಲಸಕ್ಕೆ ಕಳುಹಿಸಿಲ್ಲ. ಹಾಗೆಯೇ ದಿನ ದೂಡುತ್ತಿದ್ದನು.ನಿನ್ನೆ ರಾತ್ರಿ ಕುಡಿದು ಬಂದು ಪತ್ನಿ ಜೊತೆ ಜಗಳವಾಡಿದ್ದಾನೆ. ಇಂದು ಬೆಳಗಿನ ಜಾವ ರಾಜೀವ್‌ ಮತ್ತೆ ಪತ್ನಿ ಜೊತೆ ಜಗಳವಾಡಿದಾಗ ಆತನ ವರ್ತನೆಯಿಂದ ರೋಸಿ ಹೋದ ಆಕೆ ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡು ಪತಿಯ ಎದೆ, ಹೊಟ್ಟೆ ಸೇರಿದಂತೆ ಇನ್ನಿತರ ದೇಹದ ಭಾಗಗಳಿಗೆ ಇರಿದಿದ್ದಾಳೆ.ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ರಾಜೀವ್‌ ರಜಪೂತ್‌ ಕುಸಿದು ಬಿದ್ದಿದ್ದಾರೆ.

ಕೂಗಾಟದ ಶಬ್ದ ಕೇಳಿ ಅಕ್ಕಪಕ್ಕದ ನಿವಾಸಿಗಳು ಇವರ ಮನೆ ಬಳಿ ಬಂದು ನೋಡಿದಾಗ ರಕ್ತದ ಮಡುವಿನಲ್ಲಿ ವ್ಯಕ್ತಿ ಬಿದ್ದಿರುವುದು ಕಂಡು ಬಂದಿದೆ.ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ಕಂಡು ಬಂದಿದೆ. ಈ ಬಗ್ಗೆ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ರುಬಿನಾಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News