ಚಿಕ್ಕಬಳ್ಳಾಪುರ, ಡಿ 26– ದ್ವಿಚಕ್ರವಾಹನಕ್ಕೆ ಅತಿ ವೇಗದಿಂದ ಬಂದ ಟಿಪ್ಪರ್ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಅಜ್ಜವಾರ ಗೇಟ್‌ನಲ್ಲಿ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕು ಅಜ್ಜವಾರ ಗ್ರಾಮದ ಅರುಣ್(19), ಮನೋಜ್,(23) ನರಸಿಂಹ, (22), ನಂದೀಶ್(19) ಮೃತ ದುರ್ದೈವಿಗಳು.
ನಾಲ್ಕು ಮಂದಿ ಯುವಕರು ಕ್ರಿಸಸ್ ಹಬ್ಬದ ಅಂಗವಾಗಿ ಚಿಕ್ಕಬಳ್ಳಾಪುರದಲ್ಲಿನ ವಿವಿಧ ಚರ್ಚ್‌ಗಳಿಗೆ ತೆರಳಿ ದ್ವಿಚಕ್ರ ವಾಹನದಲ್ಲಿ ಸ್ವಗ್ರಾಮ ಅಜ್ಜವಾರಕ್ಕೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಶಿಡ್ಲಘಟ್ಟ ಕಡೆಯಿಂದ ಅತಿ ವೇಗ ಹಾಗೂ ಚಾಲಕನ ಅಜಾಗರೂಕತೆಯಿಂದಾಗಿ ಟಿಪ್ಪರ್ ಲಾರಿ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ನಾಲ್ಕು ಮಂದಿ ಯುವಕರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಅಪಘಾತದಲ್ಲಿ ಮೃತಪಟ್ಟ ಯುವಕರು ಸ್ನೇಹಿತರಾಗಿದ್ದು, ಕ್ರಿಸ್‌ಮಸ್ ಹಬ್ಬದ ಅಂಗವಾಗಿ ನಿನ್ನೆ ಸಂಜೆ ಚಿಕ್ಕಬಳ್ಳಾಪುರದಲ್ಲಿರುವ ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಗ್ರಾಮಕ್ಕೆ ಹಿಂತಿರುಗುವಾಗ ಈ ಅವಘಡ ಸಂಭವಿಸಿದೆ.
ಸುದ್ದಿ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್‌ಪಿ ಎಸ್.ಶಿವಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಶರಣಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆ ಶವಾಗಾರದ ಎದುರು ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಶಾಸಕ ಪ್ರದೀಪ್ ಈಶ್ವರ್ ಬೇಟಿ :
ಅಜ್ಜವಾರಗೇಟ್‌ನಲ್ಲಿ ನಡೆದ ಅಪಘಾತದಲ್ಲಿ ಒಂದೇ ಗ್ರಾಮದ ನಾಲ್ವರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಇಂದು ಬೆಳಗ್ಗೆ ಅಜ್ಜವಾರ ಗ್ರಾಮದ ಮೃತರ ಕುಟುಂಬಗಳಿಗೆ ತೆರಳಿ ಅವರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಅಪಘಾತ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
