ಬೆಂಗಳೂರು, ಡಿ.26- ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಪಕ್ಷ ಹೇಳುವ ಕೆಲಸಗಳನ್ನು ಎಲ್ಲರೂ ಕಾರ್ಯಕರ್ತರಾಗಿ ಮಾಡಲೇಬೇಕು ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರರಾಗಿರುವ ವಿಧಾನ ಪರಿಷತ್ ಸದಸ್ಯ ಯತೀಂದ್ರ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷ ಕಟ್ಟುವುದು ಎಲ್ಲರ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿನ್ನೆ ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ, ತಾವು ವೇದಿಕೆಯ ಮೇಲೆ ಕುಳಿತು ಭಾಷಣ ಮಾಡುವುದಕ್ಕೆ ಸೀಮಿತವಾಗಿಲ್ಲ.
ಪಕ್ಷದಲ್ಲಿ ಅಧಿಕಾರ ಇರಲಿ, ಇಲ್ಲದಿರಲಿ ಬ್ಯಾನರ್ ಕಟ್ಟಿದ್ದೇನೆ. ಪೋಸ್ಟರ್ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ. ಪಕ್ಷಕ್ಕೆ ಅಗತ್ಯವಾದ ಎಲ್ಲಾ ಜವಾಬ್ದಾರಿಗಳನ್ನು ಸಾಮಾನ್ಯ ಕಾರ್ಯಕರ್ತನಾಗಿ ಮಾಡಿದ್ದೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು.
ಇಂದು ಇದಕ್ಕೆ ಪ್ರತಿಕ್ರಿಯಿಸಿರುವ ಯತೀಂದ್ರ ಸಿದ್ದರಾಮಯ್ಯ ಎಲ್ಲರೂ ಕೂಡ ಸಾಮಾನ್ಯ ಕಾರ್ಯಕರ್ತರಾಗಿಯೇ ಪಕ್ಷ ಹೇಳಿದ ಕೆಲಸ ಮಾಡಬೇಕು. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಪಕ್ಷ ಸಂಘಟನೆ ಎಲ್ಲರ ಜವಾಬ್ದಾರಿ ಎಂದಿದ್ದಾರೆ.
ವಿವಾದದ ಕೇಂದ್ರ ಬಿಂದು:
ಅಧಿಕಾರ ಹಂಚಿಕೆಯ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು. ಸಿದ್ದರಾಮಯ್ಯ ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಾರೆ. ನಾಯಕತ್ವದ ಬದಲಾವಣೆ ಇಲ್ಲ ಎಂದು ಪದೇ ಪದೇ ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಹಾಗೂ ಅವರ ಬೆಂಬಲಿಗರಿಗೆ ತಿರುಗೇಟು ನೀಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿ ಬಣದ ಶಾಸಕರು ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದಲ್ಲದೆ, ಹೈ ಕಮಾಂಡ್ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರು.
ಈ ಹಗ್ಗಜಗ್ಗಾಟ ಒಂದು ಹಂತದಲ್ಲಿ ಪಕ್ಷದ ಶಿಸ್ತನ್ನು ಮೀರಿ ಹೋಗಿತ್ತು. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳು. ರಾಜ್ಯ ರಾಜಕೀಯದಲ್ಲಿ ಬೇರೆಯದೇ ರೀತಿಯ ಸಂದೇಶವನ್ನು ರವಾನಿಸಿದ್ದವು.
ಡಿ.ಕೆ.ಶಿವಕುಮಾರ್ ಗೆ ತಿರುಗೇಟು:
ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೇಳುತ್ತಿರುವ ನಡುವೆಯೇ ನಾಯಕತ್ವ ಬದಲಾವಣೆ ಇಲ್ಲ ಎನ್ನುವ ಯತೀಂದ್ರ ಅವರ ಮಾತುಗಳು ಡಿಕೆ ಬೆಂಬಲಿಗರನ್ನು ಕೆರಳಿಸಿತ್ತು. ಹೈಕಮಾಂಡ್ ನ ಧೋರಣೆಯಿಂದ ಅಸಮಾಧಾನಗೊಂಡಿರುವ ಡಿ.ಕೆ.ಶಿವಕುಮಾರ್, ತಮಗೆ ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ ಯಾವುದೇ ಜವಾಬ್ದಾರಿ ಇಲ್ಲದೆ ಇದ್ದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ದೆಹಲಿಯಲ್ಲಿ ಹೇಳಿದ್ದರು.
ನಿನ್ನೆ ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ಡಿ.ಕೆ.ಶಿವಕುಮಾರ್ ಅವರ ಮಾತುಗಳು ರಾಜಕೀಯವಾಗಿ ಭಾರಿ ಕುತೂಹಲ ಕೆರಳಿಸಿದ್ದವು. ನಾನು ಪಕ್ಷದ ಕಾರ್ಯಕರ್ತ. ವೇದಿಕೆಯಲ್ಲಿ ಭಾಷಣ ಮಾಡುವುದಕ್ಕೆ ಸೀಮಿತವಾಗಿಲ್ಲ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಯಾರಿಗೆ ತಿರುಗೇಟು ನೀಡಿದ್ದರು ಎಂಬ ಚರ್ಚೆಗಳು ನಡೆದಿದ್ದವು. ಅದಕ್ಕೆ ಪ್ರತಿಯಾಗಿ ಇಂದು ಯತೀಂದ್ರ ಸಿದ್ದರಾಮಯ್ಯ ಎಲ್ಲರೂ ಕಾರ್ಯಕರ್ತರಾಗಿಯೇ ಕೆಲಸ ಮಾಡಬೇಕು. ಪಕ್ಷ ಕಟ್ಟಬೇಕು ಎಂದು ಹೇಳಿರುವುದು ಏಟಿಗೆ ಎದಿರೇಟು ಎಂಬಂತಾಗಿದೆ.
