ಮೈಸೂರು,ಡಿ.26- ಸ್ಫೋಟದಲ್ಲಿ ಮೃತಪಟ್ಟ ಉತ್ತರಪ್ರದೇಶ ಮೂಲದ ಸಲೀಂ ತಂಗಿದ್ದ ಲಾಡ್ಜ್ ನಲ್ಲಿ ಪೊಲೀಸರ ತಂಡ ಪರಿಶೀಲನೆ ನಡೆಸಿದೆ. ಈ ವೇಳೆ ದೊರೆತ ಮೊಬೈಲ್‌ನಲ್ಲಿ ಆತ ಅರಮನೆಯ ಒಳಗೆ ಪ್ರೇಕ್ಷಕನಂತೆ ಹೋಗಿ ಕೆಲ ಫೋಟೊಗಳನ್ನು ತೆಗೆದು ತನ್ನ ಡಿಪಿಯಲ್ಲಿ ಅಳವಡಿಸಿಕೊಂಡಿರುವುದು ಕಂಡುಬಂದಿದೆ.
ಈತ ಕಳೆದ 15 ದಿನಗಳ ಹಿಂದೆ ಲಕ್ಷದ್ ಮೊಹಲ್ಲಾದ ಲಾಡ್‌್ಜವೊಂದರಲ್ಲಿ ತಂಗಿದ್ದ. ಈತನೊಂದಿಗೆ ಇನ್ನೂ ಇಬ್ಬರು ವಾಸವಾಗಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಪ್ರತೀ ದಿನ 100 ರೂ.ಗಳಂತೆ ಬಾಡಿಗೆ ನೀಡಿ ವಾಸವಾಗಿದ್ದರು. ಮೂವರೂ ಕೂಡ ಗ್ಯಾಸ್ ಬಲೂನ್‌ಗಳನ್ನು ಮಾರಾಟ ಮಾಡುವ ವೃತ್ತಿಯಲ್ಲಿದ್ದರು.
ನಿನ್ನೆ ಕ್ರಿಸಮಸ್ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ಇದ್ದ ಕಾರಣ ಪ್ರವಾಸಿಗರ ಸಂಖ್ಯೆ ಮೈಸೂರಿನಲ್ಲಿ ಹೆಚ್ಚಾಗಿತ್ತು. ಈ ನಡುವೆ ಸಲೀಂ ಮಾತ್ರ ನಿನ್ನೆ ಬಲೂನ್ ಮಾರಾಟ ಮಾಡಲು ಹೋಗಿದ್ದ. ಇನ್ನಿಬ್ಬರು ಲಾಡ್‌್ಜನಲ್ಲೇ ಉಳಿದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಅವರು ನೀಡಿರುವ ಮಾಹಿತಿ ಅಸ್ಪಷ್ಟವಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಪ್ರಸ್ತುತ ಸಲೀಂ ಜೊತೆ ಇದ್ದ ಇನ್ನಿಬ್ಬರೂ ಎಲ್ಲಿ ಹೋಗಿದ್ದಾರೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಇವರ ಪತ್ತೆ ಕಾರ್ಯ ಪೊಲೀಸರಿಗೆ ಹೊಸ ಸವಾಲಾಗಿದೆ.
ಘಟನೆಯಿಂದ ಮೈಸೂರಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಇದು ದುಷ್ಕೃತ್ಯವಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.ಒಟ್ಟಾರೆ ಈ ಸಂಬಂಧ ಪೊಲೀಸರ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
