ಬೆಂಗಳೂರು,ಡಿ.26- ದುಬಾರಿ ಲೋಹ ಎಂದೇ ಪರಿಗಣಿತವಾಗಿರುವ ಚಿನ್ನ, ಬೆಳ್ಳಿ ಬೆಲೆಯು ನಿರಂತರ ಏರಿಕೆಯಾಗುತ್ತಿದ್ದು, ಹೊಸ ದಾಖಲೆ ಸೃಷ್ಟಿಸಿವೆ.ಚಿನ್ನ, ಬೆಳ್ಳಿ ದರಗಳು ಏರುಗತಿಯಲ್ಲಿದ್ದು, ಗ್ರಾಹಕರ ನಿದ್ದೆಗೆಡಿಸಿವೆ. ಈಗಾಗಲೇ ದುಬಾರಿಯಾಗಿದ್ದು, ಆಭರಣಗಳನ್ನು ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದಲೂ ನಿರಂತರ ಏರಿಕೆಯಲ್ಲೇ ಇದ್ದು, ಇಳಿಕೆಯಾಗುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ.
ಚಿನ್ನದ ದರವು ಡಿಸೆಂಬರ್ 20, 21 ರಂದು ಸ್ಥಿರವಾಗಿತ್ತು. ಆದರೆ 22 ರಿಂದಲೂ ಇಂದಿನವರೆಗೆ ನಿರಂತರ ಏರಿಕೆಯಲ್ಲೇ ಇದೆ. 24 ಕ್ಯಾರೆಟ್ ಶುದ್ಧ ಚಿನ್ನವು ಪ್ರತಿ ಗ್ರಾಂಗೆ 77 ರೂ. ಏರಿಕೆಯಾಗಿದ್ದು, ಪ್ರಸ್ತುತ 14,002 ರೂ. ತಲುಪಿದ್ದು, ಇದು ಹೊಸ ಹಾಗೂ ಸಾರ್ವಕಾಲಿಕ ದಾಖಲೆಯ ಧಾರಣೆಯಾಗಿದೆ.
ಅದೇ ರೀತಿ ಆಭರಣ ಚಿನ್ನವು (22 ಕ್ಯಾರೆಟ್) 70 ರೂ.ಗಳಷ್ಟು ಏರಿಕೆಯಾಗಿದ್ದು, 12,835 ರೂ. ತಲುಪಿದೆ. ಅಪರಂಜಿ ಚಿನ್ನವು ಡಿ.22 ರಂದು 197 ರೂ., ಡಿ.23- 240 ರೂ., ಡಿ.24-38 ರೂ., ಡಿ.25-32 ರೂ. ಇಂದು 77 ರೂ. ಏರಿಕೆಯಾಗಿತ್ತು.ಆಭರಣ ಚಿನ್ನವು ಡಿ.22 ರಂದು 180 ರೂ., 23 ರಂದು 220 ರೂ., 24 ರಂದು 35 ರೂ., 25 ರಂದು 30 ರೂ. ಇಂದು 70 ರೂ. ಏರಿಕೆಯಾಗಿದೆ.
ಬೆಳ್ಳಿಧಾರಣೆಯು ಚಿನ್ನಕ್ಕಿಂತ ಹೆಚ್ಚು ವೇಗದಲ್ಲಿ ಏರಿಕೆಯಾಗುತ್ತಿದೆ. ಒಂದರ್ಥದಲ್ಲಿ ನಾಗಾಲೋಟದಲ್ಲಿ ಏರಿಕೆ ಕಂಡುಬರುತ್ತಿದೆ. ಇಂದು ಪ್ರತಿ ಗ್ರಾಂಗೆ 6 ರೂ. ಹೆಚ್ಚಳವಾಗಿದ್ದು, 240 ರೂ.ಗೆ ತಲುಪಿದೆ.
ಒಂದು ಕೆ.ಜಿ. ಬೆಳ್ಳಿಯು 2,40,000 ರೂ.ಗೆ ತಲುಪಿದೆ. ಚಿನ್ನದಂತೆ ಬೆಳ್ಳಿಯೂ ಕೂಡ ಡಿ.22 ರಿಂದ ನಿರಂತರವಾಗಿ ಏರುಗತಿಯಲ್ಲೇ ಇದ್ದು, ಇಳಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ನಿರಂತರ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟತೊಡಗಿದೆ.
ಡಿಸೆಂಬರ್ ತಿಂಗಳ ಆರಂಭದಿಂದಲೂ ಏರಿಳಿತವಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ಧಾರಣೆಯು ಕಳೆದ ನಾಲ್ಕೈದು ದಿನಗಳಿಂದಲೂ ಗಗನಮುಖಿಯಾಗಿ ಏರುತ್ತಲೇ ಇವೆ.ಬೆಲೆ ಏರಿಕೆಗೆ ಪ್ರಮುಖ ಕಾರಣ ಆಭರಣ ಖರೀದಿಗಿಂತಲೂ ಹೆಚ್ಚಾಗಿ ಹೂಡಿಕೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸುತ್ತಿರುವುದು ಪ್ರಮುಖ ಕಾರಣವಾಗಿದೆ. ವಿವಿಧ ರಾಷ್ಟ್ರಗಳು ಕೇಂದ್ರೀಯ ಬ್ಯಾಂಕ್‌ಗಳು ಹೆಚ್ಚಾಗಿ ಚಿನ್ನ ಖರೀದಿಸುತ್ತಿರುವುದು ಬೆಲೆ ಏರಿಕೆಗೆ ಕಾರಣ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ. ಚಿನ್ನದಂತೆಯೇ ಬೆಳ್ಳಿ ಧಾರಣೆಯೂ ನಿರಂತರ ಬೆಲೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 2 ಪಟ್ಟು ಹೆಚ್ಚಾಗಿದೆ.
ಚಿನ್ನದ ಆಭರಣಗಳು ದುಬಾರಿಯಾದ ಹಿನ್ನೆಲೆಯಲ್ಲಿ ಆಭರಣ ಪ್ರಿಯರು ಚಿನ್ನಲೇಪಿತ ಬೆಳ್ಳಿಯ ಆಭರಣಗಳಿಗೆ ಮೊರೆ ಹೋಗುತ್ತಿರುವುದು ಬೆಳ್ಳಿಯ ಧಾರಣೆ ಹೆಚ್ಚಾಗಲು ಒಂದು ಕಾರಣವಾದರೆ ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಮತ್ತೊಂದು ಕಾರಣವಾಗಿದೆ. ಎಲೆಕ್ಟ್ರಿಕಲ್ ವಾಹನಗಳ ತಯಾರಿಕೆ ಸಂದರ್ಭದಲ್ಲಿ ಬೆಳ್ಳಿಯನ್ನು ಬಳಸಲಾಗುತ್ತಿದೆ. ಹೀಗಾಗಿ ಬೆಳ್ಳಿಗೂ ಎಲ್ಲಿಲ್ಲದ ಬೇಡಿಕೆ ಕಂಡುಬಂದಿದೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
ವರ್ತಕರ ಅಂದಾಜಿನ ಪ್ರಕಾರ, ಸದ್ಯಕ್ಕೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಯುವ ಸೂಚನೆಗಳಿಲ್ಲ. ಏರುಗತಿಯಲ್ಲೇ ಬೆಲೆಗಳು ಮುಂದುವರೆಯುವ ಸಾಧ್ಯತೆ ಹೆಚ್ಚಾಗಿವೆ. ಬೆಳ್ಳಿಯು ಪ್ರತೀ ಕೆ.ಜಿ.ಗೆ 2,50,000 ಲಕ್ಷ ರೂ.ಗೆ ತಲುಪಬಹುದು. ಶುದ್ಧ ಚಿನ್ನವು ಪ್ರತೀ ಗ್ರಾಂಗೆ ಈಗಾಗಲೇ 14,000 ರೂ.ಗಳ ಗಡಿ ದಾಟಿದ್ದು, 15 ಸಾವಿರ ರೂ.ಗಳವರೆಗೂ ಏರಿಕೆಯಾಗಬಹುದು ಎಂದು ಅಂದಾಜು ಮಾಡಲಾಗುತ್ತಿದೆ.
