ನವದೆಹಲಿ,ಡಿ.26- ಜಾರಿ ನಿರ್ದೇಶನಾಲಯವು ಉತ್ತರ ಪ್ರದೇಶ ಮೂಲದ ಮಾಜಿ ಮುದರಸಾ ಶಿಕ್ಷಕ ಮೌಲಾನಾ ಷಂಸುಲ್ ಹುದಾ ಖಾನ್ ಎಂಬಾತನ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಯಡಿ ಪ್ರಕರಣ ದಾಖಲಿಸಿದೆ.
ಯಾರು ಈ ಷಂಸುಲ್ ಹುದಾಖಾನ್ ? :
ಈತ ಮೂಲತಃ ಉತ್ತರ ಪ್ರದೇಶದ ಅಝಂಗಢದ ಇಸ್ಲಾಮಿಕ್ ಬೋಧಕ ನಾಗಿದ್ದು 1984 ರಲ್ಲಿ ಸರ್ಕಾರಿ ಅನುದಾನಿತ ಮದರಸಾದಲ್ಲಿ ಸಹಾಯಕ ಶಿಕ್ಷಕನಾಗಿ ನೇಮಕಗೊಂಡಿದ್ದ. ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹದಳ ಶಂಕಿತ ಅಕ್ರಮ ಹಣ ವರ್ಗಾವಣೆ, ವಿದೇಶದಿಂದ ಹಣ ಪಡೆಯುವಿಕೆ ಮತ್ತು ಜನಾಂಗೀಯ ಕಾರ್ಯಜಾಲದ ಬಗ್ಗೆ ಎಫ್‌ಐಆರ್ ದಾಖಲಿಸಿದ ಬಳಿಕ ಜಾರಿ ನಿರ್ದೇಶನಾಲ ಯವು (ಇ.ಡಿ) ಪಿಎಂಎಲ್‌ಎ ಅಡಿ ಪ್ರಕರಣ ದಾಖಲಿಸಿದೆ.
2013 ರಲ್ಲಿ ಬ್ರಿಟಿಷ್ ಪೌರತ್ವ ಪಡೆದಿದ್ದರೂ ಮತ್ತು ಯುಕೆನಲ್ಲಿ ನೆಲೆಸಿದ್ದರೂ ಖಾನ್ 2017ರವರೆಗೆ ಕೆಲಸ ಮಾಡದೆ ಸರ್ಕಾರದಿಂದ ವೇತನ ಮತ್ತು ಪಿಂಚಣಿ ಪಡೆಯುವುದನ್ನು ಮುಂದುವರೆಸಿದ್ದ ಎಂದು ಆರೋಪಿಸಲಾಗಿದೆ.
ಈತ ಭಾರತದಲ್ಲಿ ಹಲವಾರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಹಲವಾರು ಕೋಟಿ ರೂ.ಗಳಷ್ಟು ದೇಣಿಗೆ ಪಡೆದು ಅದನ್ನು ಸುಮಾರು 30 ಕೋಟಿ ರೂ. ಮೌಲ್ಯದ ಚರ ಆಸ್ತಿ ಗಳಿಕೆಗೆ ಬಳಸಿದ್ದ ಎಂದು ಇ.ಡಿ ಆರೋಪಿಸಿದೆ.
ಈತ ತನ್ನ ಸರ್ಕಾರೇತರ ಸಂಸ್ಥೆ ಮತ್ತು ವೈಯಕ್ತಿಕ ಖಾತೆಗಳ ಮೂಲಕ ವಿವಿಧ ಮದರಸಾಗಳಿಗೆ ಹಣ ಪೂರೈಸುತ್ತಿದ್ದ ಎನ್ನಲಾಗಿದೆ. ಈ ವ್ಯಕ್ತಿ ಮೂಲಭೂತವಾದಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ತನಿಖೆ ನಡೆಸಲಾಗುತ್ತಿದೆ.ಈ ಮೌಲ್ವಿ ಪಾಕಿಸ್ತಾನ ಮೂಲದ ಸಂಘಟನೆಯೊಂದರ ಜೊತೆಗೆ ಸಂಪರ್ಕ ಹೊಂದಿದ್ದಾನೆ ಎಂದು ಇ.ಡಿ. ಆರೋಪಿಸಿದೆ.
ಪಿಂಎಲ್‌ಎ ಪ್ರಕರಣ ಮಾತ್ರವಲ್ಲದೆ, ವಂಚನೆ, ನಕಲು ಮಾಡುವಿಕೆ, ಪೌರತ್ವದ ಸ್ಥಾನಮಾನ ಉಲ್ಲಂಘನೆ ಸೇರಿದಂತೆ ಫೆಮಾ ಕಾನೂನು ಅಡಿಯೂ ಪ್ರಕರಣ ದಾಖಲಿಸಲಾಗಿದೆ. ಉತ್ತರ ಪ್ರದೇಶ ಸರ್ಕಾರವು ಅನಿಯಮಿತ ವೇತನ ಪಾವತಿ ಮಾಡಿರುವುದಕ್ಕಾಗಿ ಕೆಲವು ಸರ್ಕಾರಿ ಅಧಿಕಾರಿಗಳ ಅಮಾನತು ಸೇರಿದಂತೆ ಆಡಳಿತಾತಕ ಕ್ರಮ ಕೈಗೊಂಡಿದೆ.
