Friday, November 22, 2024
Homeರಾಜ್ಯಒಂದು ಬಿಂದಿಗೆ ನೀರಿಗಾಗಿ ರಾತ್ರಿಯವರೆಗೂ ಕಾದು ಕುಳಿತ ಮಹಿಳೆಯರು

ಒಂದು ಬಿಂದಿಗೆ ನೀರಿಗಾಗಿ ರಾತ್ರಿಯವರೆಗೂ ಕಾದು ಕುಳಿತ ಮಹಿಳೆಯರು

ಬೆಂಗಳೂರು,ಮೇ12- ನಾಡಿನ ಹಲವು ಕಡೆ ಬಿರು ಮಳೆಯಿಂದಾಗಿ ತಂಪಿನ ವಾತಾವರಣ ನಿರ್ಮಾಣವಾಗಿದ್ದರೆ, ಇದೇ ಸಮಯದಲ್ಲಿ ಬಯಲುಸೀಮೆ ಸೇರಿದಂತೆ ಹಲವಾರು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ.

ಈವರೆಗೂ ಲೋಕಸಭೆಯ ಚುನಾವಣೆಯ ಹಿನ್ನಲೆಯಲ್ಲಿ ರಾಜಕಾರಣಿಗಳು, ಮರಿ ಪುಡಾರಿಗಳು ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಿ ಜನರಿಗೆ ಸಮಸ್ಯೆ ಅರಿವಾಗದಂತೆ ಪರಿಸ್ಥಿತಿ ನಿಭಾಯಿಸಿದ್ದರು.
ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೂ ಚುನಾವಣೆ ಮುಗಿಯುತ್ತಿದ್ದಂತೆ ನೀರಿನ ಸಮಸ್ಯೆ ತೀವ್ರವಾಗಲಾರಂಭಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಕೆಂಚಾಪುರ ಗ್ರಾಮದಲ್ಲಿ ಒಂದು ಬಿಂದಿಗೆ ನೀರಿಗಾಗಿ ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೂ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇದೆ.

ಕಳೆದ ಎರಡು ದಿನಗಳಿಂದಲೂ ಇದೇ ವಾತಾವರಣವಿದ್ದು, ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ರಸ್ತೆಯ ಉದ್ದಗಲಕ್ಕೂ ಖಾಲಿ ಕೊಡಗಳನ್ನು ಸಾಲು ಸಾಲಾಗಿ ಜೋಡಿಸಿದ್ದು, ಟ್ಯಾಂಕರ್ ಬರುವಿಕೆಗಾಗಿ ಚಾತಕಪಕ್ಷಿಯಂತೆ ಕಾದು ಬಳಿಕ ನೀರು ಪಡೆದುಕೊಳ್ಳುವ ಪರಿಸ್ಥಿತಿ ಇದೆ. ನಿನ್ನೆ ಮಧ್ಯರಾತ್ರಿಯ ಬಳಿಕ ಟ್ಯಾಂಕರ್ ಬಂದಿದ್ದು, ಆವರೆಗೂ ಮಹಿಳೆಯರು ಕಾದು ಕುಳಿತಿದ್ದ ದಯಾನೀಯ ಸ್ಥಿತಿ ಕರುಳು ಹಿಂಡುವಂತಿತ್ತು.

ಕೆಲವು ಕಡೆ ಮಳೆ ಸುರಿಯುತ್ತಿದೆಯಾದರೂ ನೀರಿನ ಬವಣೆ ನೀಗಿಲ್ಲ. ಕೆರೆಕಟ್ಟೆಗಳಿಗೆ ನೀರು ತುಂಬಿಕೊಂಡು ಅಂರ್ತಜಲ ಚೇತರಿಕೆಯಾಗಿ ಬತ್ತಿ ಹೋಗಿರುವ ಕೊಳವೆ ಬಾವಿಗಳು ಮರುಜೀವ ಪಡೆಯಲು ಕಾಲಾವಕಾಶದ ಅಗತ್ಯವಿದೆ. ಮಳೆ ಇನ್ನೆರಡು ವಾರ ನಿಂತರವಾಗಿ ಸುರಿದರೆ ನೀರಿನ ಸಮಸ್ಯೆ ತಗ್ಗುವ ನಿರೀಕ್ಷೆ ಇದೆ. ಬಯಲುಸೀಮೆ ಹಾಗೂ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಈಗಲೂ ಕುಡಿಯುವ ನೀರಿಗಾಗಿ ಹಾಹಾಕಾರ ಮುಂದುವರೆದಿದೆ.

ಚುನಾವಣೆ ಮುಗಿಯುತ್ತಿದ್ದಂತೆ ಜನರ ಸಮಸ್ಯೆಗಳತ್ತ ಕಣ್ಣೆತ್ತಿ ನೋಡದ ರಾಜಕೀಯ ನಾಯಕರ ವಿರುದ್ಧ ಜನಸಾಮಾನ್ಯರು ಕೆಂಡ ಕಾರುತ್ತಿದ್ದಾರೆ.

RELATED ARTICLES

Latest News