ಬೆಂಗಳೂರು,ಡಿ.26- ಮೈಸೂರಿನ ಅರಮನೆ ಆವರಣದ ಮುಖ್ಯ ದ್ವಾರದ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು ಒಬ್ಬ ವ್ಯಕ್ತಿ ಮೃತಪಟ್ಟಿರುವ ಘಟನೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಿ ವರದಿ ನೀಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇತ್ತೀಚೆಗೆ ಅದೇ ಸ್ಥಳದಲ್ಲಿ ಬಲೂನು ಮಾರುವ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವಾಗಿತ್ತು. ಈಗ ಹೀಲಿಯಂ ಸಿಲಿಂಡರ್ ಸ್ಪೋಟಗೊಂಡು ಉತ್ತರ ಪ್ರದೇಶದ ಲಕ್ನೌ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಬಲೂನು ಮಾರುವ ವ್ಯಕ್ತಿ ಹೀಲಿಯಂ ಸಿಲಿಂಡರ್ ಬಳಕೆ ಮಾಡುತ್ತಿದ್ದ ಎಂಬ ಮಾಹಿತಿ ಇದೆ. ಆತನಿಗೆ ಹೀಲಿಯಂ ಮತ್ತು ಅದನ್ನು ತುಂಬುವ ಸಿಲಿಂಡರ್ ಹೇಗೆ ದೊರೆಯಿತು, ಎಲ್ಲಿಂದ ಅದನ್ನು ಖರೀದಿಸಿ ತಂದಿದ್ದ ಎಂಬೆಲ್ಲಾ ವಿಚಾರಗಳನ್ನು ಮೈಸೂರಿನ ಪೊಲೀಸರು ತನಿಖೆ ನಡೆಸುತ್ತಾರೆ ಎಂದರು.
ಮೈಸೂರು ಪ್ರವಾಸೋದ್ಯಮದ ಸೂಕ್ಷ್ಮ ಪ್ರದೇಶವಾಗಿದೆ. ಅಲ್ಲಿ ಬಲೂನು ಹಾಗೂ ಇತರ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುವವರಿಗೆ ಯಾವುದೇ ನಿರ್ಬಂಧಗಳಿಲ್ಲ, ಸರಿಯಾದ ನಿಯಮಗಳು ಪಾಲನೆ ಆಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆಯೊಂದಿಗೆ ಚರ್ಚೆ ಮಾಡಿ ನಿಯಮಗಳ ಪಾಲನೆಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.
ಸ್ಫೋಟ ಪ್ರಕರಣವನ್ನು ಮೈಸೂರಿನ ಪೊಲೀಸರೇ ತನಿಖೆ ನಡೆಸುತ್ತಾರೆ. ಅಲ್ಲಿ ಪೊಲೀಸ್ ಆಯುಕ್ತರು ಹಾಗೂ ಐಜಿ ಹಂತದ ಅಧಿಕಾರಿಗಳಿದ್ದಾರೆ. ಅವರಿಗಿಂತಲೂ ಉನ್ನತ ಮಟ್ಟದ ತನಿಖೆ ಸದ್ಯಕ್ಕೆ ಅಗತ್ಯ ಇಲ್ಲ ಎಂದು ಹೇಳಿದರು.ಪೊಲೀಸರು ತನಿಖೆ ನಡೆಸಿ ವರದಿ ನೀಡಿದ ಬಳಿಕ ಅಗತ್ಯ ಇರುವ ಮುಂದಿನ ಕ್ರಮಗಳನ್ನು ಜರುಗಿಸುವುದಾಗಿ ಗೃಹ ಸಚಿವರು ತಿಳಿಸಿದರು.
