Monday, November 25, 2024
Homeರಾಜ್ಯಇನ್ನೂ ಮೂರು ದಿನ ವರ್ಷಧಾರೆ, ಹಲವೆಡೆ ಅವಾಂತರ ಸೃಷ್ಟಿಸಿದ ಪೂರ್ವ ಮುಂಗಾರು ಮಳೆ

ಇನ್ನೂ ಮೂರು ದಿನ ವರ್ಷಧಾರೆ, ಹಲವೆಡೆ ಅವಾಂತರ ಸೃಷ್ಟಿಸಿದ ಪೂರ್ವ ಮುಂಗಾರು ಮಳೆ

ಬೆಂಗಳೂರು,ಮೇ 13- ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, ವಿವಿಧೆಡೆ ಉತ್ತಮವಾಗಿ ಮಳೆಯಾಗಿದ್ದು, ಅನ್ನದಾತರಲ್ಲಿ ಸಂತಸ ತಂದಿದ್ದರೆ, ಮತ್ತೊಂದೆಡೆ ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ತಾಲೂಕಿನ ಕಟ್ಟೀಮನಿ ಗ್ರಾಮದ ಬಳಿ ಮರ ಬಿದ್ದು, ಮಹಿಳೆ ಸಾವನ್ನಪ್ಪಿದರೆ, ಬೀದರ್‌ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಇಟಿಗ ಗ್ರಾಮದಲ್ಲಿ ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಮೈಸೂರು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಬೀದರ್‌, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ರಾಯಚೂರು ಪಟ್ಟಣದಲ್ಲಿ ಸುರಿದ ಮಳೆಯಿಂದಾಗಿ ಎಪಿಎಂಸಿ ಆವರಣದಲ್ಲಿ ಭತ್ತದ ರಾಶಿ ನೀರಿನಲ್ಲಿ ನೆಂದು ಹೋಗಿದ್ದು, ಇದರಿಂದ ಅಪಾರ ನಷ್ಟ ಸಂಭವಿಸಿದೆ.

ಚಾಮರಾಜನಗರ ತಾಲೂಕಿನ ದೇವರಾಜಪುರ, ಬ್ಯಾಡಮಡ್ಲು, ಉತ್ತುಮಳ್ಳಿಯಲ್ಲಿ ಮಳೆಯಾಗಿದ್ದು, ಕಟಾವಿಗೆ ಬಂದಿದ್ದ ಬಾಳೆ ನಾಶವಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ಯಾದಗಿರಿಯಲ್ಲಿ ಸಿಡಿಲು ಬಡಿದು ಕುರಿಗಾಹಿ ಸಾವನ್ನಪ್ಪಿರುವ ಘಟನೆ ಶಹಪುರ ತಾಲೂಕಿನ ವೀಬೂತಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಳೆಗೆ ರಾಜ್ಯದ ವಿವಿಧೆಡೆ ಮೂವರು ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿಯೂ ಸಹ ಉತ್ತಮವಾಗಿ ಮಳೆಯಾಗಿದ್ದು, ಅಲ್ಲಲ್ಲಿ ಗಾಳಿಗೆ ಮರಗಳು ಉರುಳಿ ಬಿದ್ದಿವೆ. ಹಾಸನ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಇಂದು ಮುಂಜಾನೆಯಿಂದ ತುಂತುರು ಮಳೆಯಾಗಿದೆ.

ಮೂರು ದಿನ ಮಳೆ ಸಾಧ್ಯತೆ :
ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದ ಎಲ್ಲಾ ಜಿಲ್ಲೆಗಗಳಲ್ಲೂ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಬಿರು ಬೇಸಿಗೆಯಿಂದ ಕಂಗಾಲಾಗಿದ್ದ ರಾಜ್ಯದ ಜನತೆಗೆ ವರುಣ ತಂಪೆರೆದಿದ್ದು, ತಂಪು ವಾತಾವರಣದಿಂದ ನಿಟ್ಟುಸಿರು ಬಿಡುವಂತಾಗಿದೆ.

RELATED ARTICLES

Latest News