ಬೆಂಗಳೂರು,ಮೇ 15- ಸಂಸದ ಪ್ರಜ್ವಲ್ ರೇವಣ್ಣ ಯಾರ ಸಂಪರ್ಕದಲ್ಲೂ ಇಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪ ಕೇಳಿ ಬಂದ ಕೂಡಲೇ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಅವರು ಎಲ್ಲಿಗೆ ಹೋದರು? ಏಕೆ ಹೋದರು? ಯಾವಾಗ ಬರುತ್ತಾರೆ? ಎಂಬ ಮಾಹಿತಿ ಯಾರಿಗೂ ಇಲ್ಲ. ಅವರ ಮನೆಯವರಿಗೂ ಸರಿಯಾದ ಮಾಹಿತಿ ಇಲ್ಲವಂತೆ ಎಂದರು.
ಅವರನ್ನು ಪತ್ತೆ ಹಚ್ಚಲು ಸರ್ಕಾರ ಬ್ಲೂ ಕಾರ್ನರ್ ನೋಟೀಸ್ ಕೊಟ್ಟಿದ್ದು, ಅವರನ್ನು ಪತ್ತೆ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆಯಾದರೂ ಅವರು ಯಾರ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಹೇಳಿದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ರೇವಣ್ಣ ಅವರು ಬಂಧನವಾಗಿದ್ದಕ್ಕೆ ನೋವನ್ನು ವ್ಯಕ್ತಪಡಿಸಿದ್ದಾರೆ. ತಪ್ಪು ಮಾಡದಿದ್ದರೂ ರೇವಣ್ಣ ಅವರ ಬಂಧನವಾಗಿತ್ತು. ಈ ವಿಚಾರ ದೇವೇಗೌಡರಿಗೆ ಬಹಳ ನೋವುಂಟು ಮಾಡಿದೆ ಎಂದರು.
ಸರ್ಕಾರ ಪ್ರಜ್ವಲ್ ಮೇಲೆ ಕೇಳಿಬಂದಿರುವ ಆರೋಪದ ಬಗ್ಗೆ ಎಸ್‌ಐಟಿ ರಚನೆ ಮಾಡಿದೆ. ಎಸ್‌ಐಟಿ ಆ ಬಗ್ಗೆ ತನಿಖೆ ಕೈಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೇವಣ್ಣ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವುದು ಸಹಜ. ರಾಜಕೀಯವಾಗಿ ಒಬ್ಬರಿಗೊಬ್ಬರು ಮಾತನಾಡುವಾಗ ಟೀಕೆ, ಟಿಪ್ಪಣಿಗಳು ಸಾಮಾನ್ಯ.
ರೇವಣ್ಣ ಅವರು ತಪ್ಪು ಮಾಡದೇ ಶಿಕ್ಷೆ ಅನುಭವಿಸುವಂತಾಯಿತಲ್ಲ ಎಂದು ಅವರ ಮನಸ್ಸಿನಲ್ಲೂ ನೋವಿರಬಹುದು. ಈ ವಿಚಾರ ರಾಜ್ಯದ ಜನತೆಗೂ, ರಾಜಕಾರಣಿಗಳಿಗೂ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಗೂ ಗೊತ್ತಿದೆ. ಎಸ್‌ಐಟಿ ಮೂಲಕ ರೇವಣ್ಣ ಅವರನ್ನು ಬಂಧಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ ಎಂದರು.
ಜೈಲಿನಲ್ಲಿದ್ದಾಗ ರೇವಣ್ಣ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ದೇವರು ಯಾವ ದಾರಿ ತೋರುತ್ತಾರೋ ನೋಡೋಣ ಎಂದು ಹೇಳಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ ಅವರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಜಿ.ಟಿ.ದೇವೇಗೌಡರು ತಿಳಿಸಿದರು.ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ವಿವೇಕಾನಂದ ಅವರನ್ನು ಆಯ್ಕೆ ಮಾಡಿದ್ದು, ದೇವೇಗೌಡರಿಂದ ಬಿ ಫಾರಂ ಪಡೆಯಲಾಗಿದೆ ಎಂದು ಹೇಳಿದರು.