ನವದೆಹಲಿ,ಮೇ 16- ದೆಹಲಿ ಅಬಕಾರಿ ಪರಿಷ್ಕರಣೆಯಲ್ಲಿ ಕಿಕ್‌ಬ್ಯಾಕ್ ಪಡೆದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿರುವುದನ್ನು ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಆರೋಪಿ ಸ್ಥಾನದಲ್ಲಿರುವ ಪ್ರಮುಖ ಆರೋಪಿಗೆ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದ ನಂತರ ಚುನಾವಣಾ ಪ್ರಚಾರದಲ್ಲಿ ಅವರ ಭಾಷಣಗಳು ವ್ಯವಸ್ಥೆಯ ಮುಖಕ್ಕೆ ಕಪಾಳಮೋಕ್ಷ ಮಾಡಿದಂತಿದೆ ಎಂದು ಇಡಿ ಪರ ವಕೀಲರು ಅಪಸ್ವರ ತೆಗೆದಿದ್ದಾರೆ.
ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ನಾವು ನೀಡಿರುವ ಆದೇಶ ಸ್ಪಷ್ಟವಾಗಿದೆ. ಮಧ್ಯಂತರ ಜಾಮೀನು ನೀಡುವಾಗ ನಾವು ಯಾವುದೇ ಆರೋಪಿಗೆ ವಿನಾಯಿತಿ ನೀಡಿಲ್ಲ ಮತ್ತು ತೀರ್ಪಿನ ಬಗ್ಗೆ ವಿಶ್ಲೇಷಣೆ ನಡೆದಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದಷ್ಟೇ ಪ್ರತಿಕ್ರಿಯಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕುರ್ ದತ್ತ ಅವರನ್ನೊಳಗೊಂಡ ದ್ವಿಸದಸ್ಯ ಪೀಠದ ಮುಂದೆ ಇಡಿ ಪರ ವಕೀಲರು ಹಾಜರಾಗಿ ಅರವಿಂದ್ ಕೇಜ್ರಿವಾಲ್‌ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ ಅವರು ಚುನಾವಣಾ ಪ್ರಚಾರದಲ್ಲಿ ಏನು ಭಾಷಣ ಮಾಡುತ್ತಿದ್ದಾರೆ? ಅವರ ಒಂದೊಂದು ಹೇಳಿಕೆಗಳು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂದು ಆರೋಪಿಸಿದರು.
ಇಡಿ ಪರವಾಗಿ ಹಾಜರಾದ ಕೇಂದ್ರ ಸರ್ಕಾರದ ಸಾಲಿಸೀಟರ್ ಜನರಲ್ ತುಷಾರ್ ಮೆಹ್ತಾ ಅವರು ಅರವಿಂದ್ ಕೇಜ್ರಿವಾಲ್ ಅವರು ರ್ಯಾಲಿಗಳಲ್ಲಿ ಮಾಡುತ್ತಿರುವ ಭಾಷಣಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಎಎಪಿಗೆ ಮತ ಹಾಕಿದರೆ ನಾನು ಜೂನ್ 2 ರಂದು ಜೈಲಿಗೆ ಹೋಗಬೇಕಾಗಿಲ್ಲ ಎಂದು ಹೇಳುತ್ತಾರೆ. ಜೂನ್ 5 ರಂದು ನಾನು ಜೈಲಿನಿಂದ ಬಿಡುಗಡೆಯಾಗುತ್ತೇನೆ ಎಂದು ಹೇಳಿದರೆ ಜನತೆಗೆ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವ ಇರುತ್ತದೆಯೇ? ಇದರಿಂದ ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ? ಎಂದು ಪ್ರಶ್ನೆ ಮಾಡಿದರು.
ಈ ವೇಳೆ ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಗ್ವಿ, ನನ್ನ ಕಕ್ಷಿದಾರರು ಈ ಮಾತನ್ನು ಹೇಳಿದ್ದಾರೆ? ಇದು ನನ್ನ ಗಮನಕ್ಕೆ ಬಂದಿಲ್ಲ ಎಂದರು.ಆಗ ಮಧ್ಯಪ್ರವೇಶಿಸಿದ ನ್ಯಾಯಾಲಯ, ಇದು ಅವರ ಊಹೆ. ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ಅಷ್ಟಕ್ಕೂ ನಾವು ಆರೋಪಿ ಸ್ಥಾನದಲ್ಲಿರುವವರಿಗೆ ನೀಡಿರುವುದು ಷರತ್ತುಬದ್ಧ ಜಾಮೀನು. ನಾವು ಊಹೆಗಳ ಮೇಲೆ ತೀರ್ಪು ನೀಡುವುದಿಲ್ಲ ಮತ್ತು ಅದರ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು.
ಈ ವೇಳೆ ಅಭಿಷೇಕ್ ಮನುಸಿಂಗ್ವಿಯವರು ಸುಪ್ರೀಂಕೋರ್ಟ್ ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡಿರುವುದರ ಕುರಿತು ಕೇಂದ್ರದ ಹಿರಿಯ ಸಚಿವರೊಬ್ಬರು ನೀಡಿರುವ ಹೇಳಿಕೆಯನ್ನು ಪೀಠದ ಗಮನಕ್ಕೆ ತಂದರು. ಇದಕ್ಕೂ ಸಹ ನ್ಯಾಯಮೂರ್ತಿಗಳು ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು, ನಾವು ಯಾರಿಗೂ ಕೂಡ ವಿನಾಯಿತಿ ಕೊಟ್ಟಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಟೀಕೆಗಳನ್ನು ನಾವು ಸ್ವಾಗತಿಸುತ್ತೇವೆ. ಟೀಕೆಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರು(ಕೇಜ್ರಿವಾಲ್) ಯಾವಾಗ ನ್ಯಾಯಾಲಯಕ್ಕೆ ಶರಣಾಗಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚಿಸಲಾಗಿದೆ. ಇದರ ಹೊರತು ಇನ್ನೇನೂ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.